‘ಶಾಸ್ತ್ರೀಯ ಭಾಷೆ’ ಖಾಯಂ ಕಚೇರಿಗೆ 4.2 ಎಕರೆ ಜಾಗ ಮಂಜೂರು : ಸಚಿವ ತಂಗಡಗಿ

Update: 2025-03-14 23:00 IST
‘ಶಾಸ್ತ್ರೀಯ ಭಾಷೆ’ ಖಾಯಂ ಕಚೇರಿಗೆ 4.2 ಎಕರೆ ಜಾಗ ಮಂಜೂರು : ಸಚಿವ ತಂಗಡಗಿ
  • whatsapp icon

ಬೆಂಗಳೂರು: ಕನ್ನಡ ಶಾಸ್ತ್ರೀಯ ಭಾಷೆಗೆ ಖಾಯಂ ಕಚೇರಿ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಮೈಸೂರು ವಿಶ್ವವಿದ್ಯಾನಿಲಯವು 4.2 ಎಕರೆ ಜಮೀನನ್ನು ಮಂಜೂರು ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಶುಕ್ರವಾರ ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2008ರಲ್ಲಿ ಕೇಂದ್ರ ಸರಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ಘೋಷಣೆ ಮಾಡಿತು. ಆದರೆ ಈವರೆಗೂ ಖಾಯಂ ಕಚೇರಿ ಇರಲಿಲ್ಲ ಎಂದರು.

ಮೈಸೂರು ವಿ.ವಿ.ಯಲ್ಲಿ ಖಾಯಂ ಕಚೇರಿ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಜಮೀನು ನೀಡಬೇಕೆಂದು ಇಲಾಖೆ ವತಿಯಿಂದ ಪತ್ರ ಬರೆಯಲಾಗಿತ್ತು. ಇದೀಗ ನನಗೆ 4.2 ಎಕರೆ ಜಮೀನು ಮಂಜೂರು ಮಾಡಿದೆ. ಇದರಿಂದ ಖಾಯಂ ಕಟ್ಟಡ ಪ್ರಾರಂಭವಾಗುತ್ತದೆ. ಹೆಚ್ಚಿನ ಸಂಶೋಧನೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದು ಶಿವರಾಜ್ ತಂಗಡಗಿ ಹೇಳಿದರು.

ಖಾಯಂ ಕಚೇರಿ ಇಲ್ಲದಿದ್ದರೆ ಅನುದಾನವನ್ನು ನೀಡಲು ಕಷ್ಟಸಾಧ್ಯ ಎಂದು ಕೇಂದ್ರ ಸರಕಾರ ಸೂಚನೆ ಕೊಟ್ಟಿತ್ತು. ಈಗ ನಮಗೆ ಖಾಯಂ ಕಟ್ಟಡ ಲಭ್ಯವಾಗುತ್ತದೆ. ಇದನ್ನು ಕನ್ನಡ ಭಾಷಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗುವುದು. ಕಟ್ಟಡವನ್ನು ಶೀಘ್ರದಲ್ಲೇ ನೋಂದಣಿ ಮಾಡಿ ಹಸ್ತಾಂತರ ಮಾಡಲಾಗುವುದು ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ನಮಗೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಕ್ಕರೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತವೆ. ಇದರಿಂದ ಭಾಷಾ ಬೆಳವಣಿಗೆಯೂ ವೃದ್ಧಿಯಾಗುತ್ತದೆ. ಕೇಂದ್ರ ಸರಕಾರವು ಆದಷ್ಟು ಬೇಗ ಅನುದಾನವನ್ನು ನೀಡಲಿ ಎಂದು ಶಿವರಾಜ್ ತಂಗಡಗಿ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News