ʼಗ್ರೇಟರ್ ಬೆಂಗಳೂರುʼ ವಿಧೇಯಕದ ವಿರುದ್ಧ ಜೆಡಿಎಸ್ ಪ್ರತಿಭಟನೆ

ಬೆಂಗಳೂರು : ರಿಯಲ್ ಎಸ್ಟೇಟ್ ದಂಧೆ ನಡೆಸುವುದು ಹಾಗೂ ಬೆಂಗಳೂರು ನಗರದಲ್ಲಿ ಕನ್ನಡಿಗರನ್ನು ಒಡೆದು ಆಳುವ ದುರುದ್ದೇಶದಿಂದ ಕಾಂಗ್ರೆಸ್ ಸರಕಾರವು ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಏಳು ಭಾಗಗಳನ್ನಾಗಿ ಛಿಧ್ರ ಮಾಡಲು ಹೊರಟಿದೆ ಎಂದು ಜೆಡಿಎಸ್ ಆರೋಪ ಮಾಡಿದೆ.
ಗ್ರೇಟರ್ ಬೆಂಗಳೂರು ರಚನೆಯ ವಿರುದ್ಧ ಜೆಡಿಎಸ್ ಕಾರ್ಯರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು,; ಕೇವಲ ಭೂ ದಂಧೆ ನಡೆಸುವ ಏಕೈಕ ಉದ್ದೇಶ ಹಾಗೂ ಬೆಂಗಳೂರಿನಲ್ಲಿಯೇ ಕನ್ನಡಿಗರನ್ನು ಪರಕೀಯರನ್ನಾಗಿ ಮಾಡುವ ದುರುದ್ದೇಶದಿಂದ ಸರಕಾರವು ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದರು.
ಅಲ್ಲದೇ, ವಿಧಾನಮಂಡಲದಲ್ಲಿ ಕಾಂಗ್ರೆಸ್ ಸರಕಾರ ಬೆಂಗಳೂರು ಜನರ ಭಾವನೆಗಳಿಗೆ ವಿರುದ್ಧವಾಗಿ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪಾಸ್ ಮಾಡಿಕೊಂಡಿದೆ. ರಾಜ್ಯಪಾರು ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಸಹಿ ಹಾಕಬಾರದು. ಮತ್ತೂ ಆ ವಿಧೇಯಕವನ್ನು ತಿರಸ್ಕರಿಸಬೇಕು ಎಂದು ಕೋರುತ್ತೇವೆ. ಈ ಬಗ್ಗೆ ನಮ್ಮ ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರು ವಾಸ ಮಾಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರಿಲ್ಲ, ಸರಿಯಾದ ಮೂಲಸೌಕರ್ಯಗಳು ಇಲ್ಲ. ರಸ್ತೆಗುಂಡಿಗಳನ್ನು ಮುಚ್ಚಲು ಈ ಸರಕಾರದಲ್ಲಿ ನಯಾಪೈಸೆ ಹಣವಿಲ್ಲ. ಈಗ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಜನರನ್ನು ಯಾಮಾರಿಸಲು ಹೊರಟಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಬೇಸಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ. ಆಗಲೇ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಒಂದು ನೀರಿನ ಟ್ಯಾಂಕರ್ ಗೆ ಐದು ಸಾವಿರ, ಆರು ಸಾವಿರ ಕೊಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಂಗಳೂರಿನ ಜನ ನಿಜಕ್ಕೂ ದಿನಿತ್ಯವೂ ಸತ್ತು ಬದುಕುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರದ ದುರಾಡಳಿತವೇ ಕಾರಣ ಎಂದು ಆರೋಪ ಮಾಡಿದರು.
ಕೂಡಲೇ ಗ್ರೇಟರ್ ಬೆಂಗಳೂರು ವಿಧೇಯಕವನ್ನು ರಾಜ್ಯ ಸರಕಾರ ವಾಪಸ್ ವಿಧೇಯಕವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ನಗರದಲ್ಲಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕರ ಕಾರ್ಯಕ್ರಮಗಳನ್ನು ನಡೆಯಲು ಬಿಡುವುದಿಲ್ಲ. ಅಲ್ಲೆಲ್ಲ ನಾವು ಪಕ್ಷದ ವತಿಯಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ಕೊಟ್ಟರು.
ಮತ್ತೆ ಹಾಲಿನ ದರ ಏರಿಕೆ ಮಾಡಲು ಈ ಸರಕಾರ ಹೊರಟಿದೆ. ಬೆಂಗಳೂರು ಜನರನ್ನು ಈ ಸರಕಾರ ಏನು ಮಾಡಲು ಹೊರಟಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಸರಕಾರ ಬಂದಾಗಿನಿಂದ 43 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ತರಿಗೆ ಹಾಕಿದ್ದೀರಿ. ಇದು ಬಹಳ ಅನ್ಯಾಯ ಎಂದು ಅವರು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಜವರಾಯಿ ಗೌಡ, ಮಾಜಿ ಎಂಎಲ್ ಸಿ ಕೆ.ಎ. ತಿಪಪೇಸ್ವಾಮಿ, ಬೆಂಗಳೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾವ್, ಮುಖಂಡರಾದ ನಾಗೇಶ್ ರಾವ್, ವೆಂಕಟಸ್ವಾಮಿ, ವೇಣುಗೋಪಾಲ್, ಮಂಗಳಮ್ಮ ಪ್ರವೀಣ್ ಕುಮಾರ್, ಸ್ಯಾಮುಯಲ್, ಅಪ್ರೋಜ್ ಬೇಗ್ ಸೇರಿದಂತೆ ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಪಕ್ಷದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.