ನಮ್ಮ ರಾಜ್ಯದಲ್ಲಿ ಹಿಂದಿ ಕಲಿತು ಎಷ್ಟು ಜನರಿಗೆ ಕೆಲಸ ದೊರೆತಿದೆ : ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : 1968ರಲ್ಲಿ ಜಾರಿಯಾದ ತ್ರಿಭಾಷಾ ಸೂತ್ರದ ಬಗ್ಗೆ ಇನ್ನು ಮೌಲ್ಯಮಾಪನ ನಡೆದಿಲ್ಲ. ಆದರೆ ಎನ್‍ಇಪಿಯಲ್ಲಿ ತ್ರಿಭಾಷಾ ಸೂತ್ರವನ್ನು ಮುಂದುವರೆಸುವಂತೆ ಹೇಳಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಹಿಂದಿ ಕಲಿತು ಎಷ್ಟು ಜನರಿಗೆ ಕೆಲಸ ದೊರೆತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದ್ದಾರೆ.
ರವಿವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಸಂಘಟನೆಯು ಆಯೋಜಿಸಿದ್ದ ದ್ವಿಭಾಷ ನೀತಿಗಾಗಿ ಹೋರಾಟ- ಸಾರ್ವಜನಿಕ ಹಕ್ಕೋತ್ತಾಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನ್ಯಾಷನಲ್ ಕ್ಯಾಪಿಟಲ್ ರಿಜನ್‍ಗಳಾದ(ಎನ್‍ಸಿಆರ್) ದಿಲ್ಲಿ, ಫಾರಿದಾಬಾದ್, ಘಾಜಿಯಾಬಾದ್, ಗುರುಗಾವ್ ಮತ್ತು ನೋಯ್ಡಾದಲ್ಲಿ 12 ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದು, ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಿರುವ ತಮಿಳುನಾಡಿನವರು 4 ಲಕ್ಷ ಮಂದಿ ಇದ್ದರೆ, ತ್ರಿಭಾಷಾ ಸೂತ್ರ ಅನುಸರಿಸುವ ಕರ್ನಾಟಕದವರ ಸಂಖ್ಯೆ 700 ಇದೆ ಎಂದು ಅವರು ತಿಳಿಸಿದರು.
ದೇಶಕ್ಕೆ ಒಂದು ನಿರ್ದಿಷ್ಟ ಭಾಷಾ ನೀತಿ ಇಲ್ಲ. ಒಂದು ಪಕ್ಷ ಅಧಿಕಾರದಲ್ಲಿದ್ದರೆ, ಒಂದು ಸಿದ್ದಾಂತ ಹೇಳುತ್ತದೆ. ಮತ್ತೊಂದು ಸರಕಾರ ಅಧಿಕಾರಕ್ಕೆ ಬಂದರೆ, ಮತ್ತೊಂದು ಸಿದ್ದಾಂತ ಅನುಸರಿಸುತ್ತದೆ. ಹೀಗಾಗಿ ಕರ್ನಾಟಕ ರಾಜ್ಯವಾದರೂ ದ್ವಿಭಾಷಾ ಸೂತ್ರ ಅನುಸರಿಸುವುದನ್ನು ಕೇಂದ್ರವಾಗಿ ಇರಿಸಿಕೊಂಡು ತನಗೆ ಬೇಕಾದಂತಹ ಭಾಷಾ ನೀತಿಯನ್ನು ರೂಪಿಸಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ರಮೇಶ್ ಬೆಲ್ಲಂಕೊಂಡ ಮಾತನಾಡಿ, ನಮ್ಮ ದೇಶದಲ್ಲಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ನಡೆಯುತ್ತಿದೆ. ಯುಪಿಎಸ್‍ಸಿ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾಡುತ್ತಿದ್ದಾರೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದರು.
ಎಲ್ಲ ಬ್ಯಾಂಕ್‍ಗಳ ಮ್ಯಾನೇಜರ್ ಹಿಂದಿಯೇತರರೇ ಆಗುತ್ತಿದ್ದಾರೆ. ನಮ್ಮನ್ನು ಕಸ ಗುಡಿಸುವಂತಹ ‘ಡಿ’ಗ್ರೂಪ್ ಕೆಲಸಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ನಮ್ಮನ್ನು ಎರಡನೆ ದರ್ಜೆಯ ಪ್ರಜೆಯನ್ನಾಗಿ ನೋಡುತ್ತಿದ್ದು, ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಭಾಷಾ ವೈವಿಧ್ಯತೆಯ ಬಗ್ಗೆ ತಿಳಿದಿರಬೇಕು. ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಭಾಷಾ ವೈವಿಧ್ಯತೆಯ ಪ್ರಜ್ಞೆ ಇರುವುದಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿಯನ್ನು ಕಲಿಯಬೇಕು. ಎಂದು ಒತ್ತಾಯಿಸುತ್ತಿದ್ದಾರೆ. ಹಿಂದಿ ಭಾಷಾ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಉತ್ತರ ಭಾರತದ ಸಂಸದರು ಸಂಸತ್ತಿನಲ್ಲಿ ಹಿಂದಿ ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ. ಆದರೆ ನಮ್ಮ ರಾಜ್ಯದ ಸದಸ್ಯರು ಅರೆಬರೆ ಹಿಂದಿ ಮಾತನಾಡಿ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ ಎಂದು ರಮೇಶ್ ಬೆಲ್ಲಂಕೊಂಡ, ತ್ರಿಭಾಷಾ ಸೂತ್ರ ಕರ್ನಾಟಕದಂತಹ ರಾಜ್ಯಗಳಿಗೆ ತುಂಬಾ ಹಾನಿಕಾರಿಕ. ಆದರೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ತ್ರಿಭಾಷಾ ಸೂತ್ರದ ಪರ ಹೇಳಿಕೆ ಕೊಟ್ಟಿದ್ದಾರೆ. ಅವರು ಬುದ್ದಿವಂತರು ಎನ್ನುವ ಕಾರಣಕ್ಕೆ ಎಲ್ಲರ ಮೇಲೆ ಭಾಷೆ ಕಲಿಕೆ ಹೇರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಆದರೂ ಹಿಂದಿಯನ್ನು ರಾಷ್ಟ್ರೀಯತೆ ಎಂದು ಬಿಂಬಿಸುತ್ತಿದ್ದಾರೆ. ಕನ್ನಡ ಹಿಂದಿ ಭಾಷೆಗಿಂತ ಕಡಿಮೆ ಏನಲ್ಲ. ತಮಿಳಿಗರು ಹಿಂದಿ ಹೇರಿಕೆಗೆ ತಡೆಗೋಡೆಯಾಗಿ ನಿಂತಿದ್ದಾರೆ. ಹೀಗಾಗಿ ಭಾಷಾ ವಿಚಾರವಾಗಿ ನಾವು ಅವರ ಜೊತೆ ನಿಂತು ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆಯ ಆನಂದ್ ಜಿ., ಕವಿರಾಜ್, ಜಿ.ಎಂ.ಗಿರಿರಾಜ್ ಸೇರಿದಂತೆ ಮತ್ತಿತರರು ಇದ್ದರು.
ನಮ್ಮ ಸಂಸದರು ಹಿಂದಿ ಕಲಿಯದ ಕಾರಣ ಅವರು ಸಂಸತ್ತಿನಲ್ಲಿ ಮಾತನಾಡುತ್ತಿಲ್ಲ. ಕನ್ನಡದಲ್ಲಿ ಮಾತನಾಡಲು ಅವರಿಗೆ ಕೀಳರಿಮೆ ಇದೆ. ಹಿಂದಿ ಮಾತನಾಡುವ ರಾಜ್ಯಗಳ ಉನ್ನತ ಶಿಕ್ಷಣದಲ್ಲಿಯೇ ಹಿಂದಿ ಪ್ರಯೋಜನಕ್ಕೆ ಬರುತ್ತಿಲ್ಲ. ಇನ್ನು ನಾವು ಹಿಂದಿ ಕಲಿತು ಏನು ಪ್ರಯೋಜನ? ಹಿಂದಿ ಮಾತನಾಡುವ ರಾಜ್ಯಗಳಲ್ಲಿಯೇ ಹಿಂದಿ ಬಳಕೆ ಆಗದೆ ಇದ್ದರೆ, ಅದು ರಾಷ್ಟ್ರ ಭಾಷೆಯಾಗುವುದು ಹೇಗೆ?
- ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ