ಬೆಂಗಳೂರು | ವೃದ್ಧ ಅತ್ತೆ, ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆಗೆ ಶೋಕಾಸ್ ನೋಟಿಸ್

Update: 2025-03-16 23:15 IST
ಬೆಂಗಳೂರು | ವೃದ್ಧ ಅತ್ತೆ, ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆಗೆ ಶೋಕಾಸ್ ನೋಟಿಸ್
  • whatsapp icon

ಬೆಂಗಳೂರು : ವಯೋವೃದ್ಧ ಅತ್ತೆ ಮಾವನ ಮೇಲೆ ಅಮಾನಮೀಯವಾಗಿ ಹಲ್ಲೆ ಮಾಡಿ, ಮಕ್ಕಳ ಜೊತೆಗೂಡಿ ಕಿರುಕುಳ ಕೊಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ನಿರ್ದೇಶನದ ಮೇರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು ಕೂಡಲೇ ಇದಕ್ಕೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ.ಪ್ರಿಯದರ್ಶಿನಿ ಅವರಿಗೆ ಲಿಖಿತ ಸಮಾಜಾಯಿಷಿ ನೀಡಲು ನೋಟಿಸ್‍ನಲ್ಲಿ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ.ಪ್ರಿಯದರ್ಶಿನಿ ಎನ್. ಇತ್ತೀಚೆಗೆ ತಮ್ಮ ಮಕ್ಕಳ ಜೊತೆಗೂಡಿ ವಯೋವೃದ್ಧ ಅತ್ತೆ, ಮಾವಂದಿರನ್ನು ಥಳಿಸಿದ ವೀಡಿಯೋ ಭಾರಿ ವೈರಲ್ ಆಗಿತ್ತು. ಕಳೆದ ಹತ್ತು ವರ್ಷದಿಂದಲೂ ಡಾ.ಪ್ರಿಯದರ್ಶಿನಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಿಯದರ್ಶಿನಿ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೂ ಅತ್ತೆ ಮಾವನ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಇದು ಇಲಾಖೆಗೆ ತೀವ್ರ ಮುಜುಗರ ತರುವ ವಿಷಯವಾಗಿದ್ದು, ಕೂಡಲೇ ವೈದ್ಯೆ ಪ್ರಿಯದರ್ಶಿನಿಗೆ ಶೋಕಾಸ್ ನೋಟಿಸ್ ನೀಡಿ, ವಿವರಣೆ ಪಡೆಯಿರಿ ಎಂದು ಸೂಚಿಸಿದರು. ಇದರ ಬೆನ್ನಲ್ಲೇ ಈಗ ಡಿಎಂಇ ಡಾ.ಸುಜಾತಾ ರಾಥೋಡ್ ನೋಟಿಸ್ ಜಾರಿ ಮಾಡಿದ್ದಾರೆ.

ವೃದ್ಧ ಅತ್ತೆ-ಮಾವಂದಿರ ಮೇಲೆ ನಡೆದಿರುವ ಹಲ್ಲೆ ವೀಡಿಯೋ ಮೇರೆಗೆ ಅನ್ನಪೂರ್ಣೇಶ್ವರಿ ಪೆಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವರ್ತನೆಯು ಸರಕಾರಿ ವೈದ್ಯಾಧಿಕಾರಿಗೆ ತರವಲ್ಲದ್ದಾಗಿದೆ. ಆದುದರಿಂದ, ಪ್ರಕರಣದ ಕುರಿತು ಲಿಖಿತ ಸಮಜಾಯಿಷಿ ನೀಡಲು ನೋಟಿಸ್ ಜಾರಿ ನೀಡಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಹಮ್ಮದ್ ಮೊಹ್ಸಿನ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News