ಅರಮನೆ ಮೈದಾನ ಸುತ್ತಮುತ್ತಲಿನ ರಸ್ತೆಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದವರ ವಿರುದ್ದ ಕ್ರಮ ಜರುಗಿಸಿ; ನೈಜ ಹೋರಾಟಗಾರರ ವೇದಿಕೆ ಒತ್ತಾಯ
ಬೆಂಗಳೂರು : ನಗರದಲ್ಲಿರುವ ಬಳ್ಳಾರಿ ರಸ್ತೆಯ ಅರಮನೆ ಮೈದಾನ, ಮೇಕ್ರಿ ಸರ್ಕಲ್ ಸೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಕೆ ಮಾಡಿದ್ದು, ಫ್ಲೆಕ್ಸ್ ಗಳನ್ನು ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವೇದಿಕೆಯ ಸಂಚಾಲಕ ಎಚ್.ಎಂ. ವೆಂಕಟೇಶ್ ಪತ್ರ ಬರೆದಿದ್ದು, ನ್ಯಾಯಾಲಯದ ಆದೇಶಕ್ಕಾದರೂ ಗೌರವ ನೀಡಿ ಮತ್ತು ಸಂವಿಧಾನದತ್ತವಾದ ಅಧಿಕಾರವನ್ನು ಬಳಸಿ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆ.
ಅರಮನೆ ಮೈದಾನದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸಮಾವೇಶವೊಂದು ನಡೆಯುತ್ತಿದ್ದು, ಈ ಸಂಬಂಧ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಇದನ್ನು ತೆರವುಗೊಳಿಸುವ ಇಚ್ಛಾಶಕ್ತಿ, ಧೈರ್ಯ, ಸಾಹಸ ಬಿಬಿಎಂಪಿಯಲ್ಲಿ ಕರ್ತವ್ಯ ಪಾಲನೆ ಮಾಡುವ ಯಾರಿಗೂ ಇಲ್ಲದಿರುವುದು ನಮಗೆ ಸ್ಪಷ್ಟವಾಗಿ ಅರಿವಿದೆ. ಕಾರ್ಯಕ್ರಮಗಳೆಲ್ಲ ಮುಗಿಯುವವರೆಗೂ ಕಾಯುವ ನಿಮ್ಮ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಮುಗಿದ ನಂತರ ರಾತ್ರಿ ಇದನ್ನು ತೆರವುಗೊಳಿಸಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ನಾವು ಹಲವಾರು ಬಾರಿ ಫ್ಲೆಕ್ಸ್ ಗಳ ತೆರವುಗೊಳಿಸುವ ಬಗ್ಗೆ ಮನವಿ ಮಾಡಿದರೂ, ಕ್ರಮ ಕೈಗೊಳ್ಳದೆ ಇದ್ದಾಗ ನಿಮಗೆ ತಿಳಿಸಿದ್ದೇವೆ. ನಾವು ಫ್ಲೆಕ್ಸ್ ಹರಿದು ಹಾಕುವ ಚಳುವಳಿಯನ್ನು ಮಾಡಿರುವ ವಿಷಯ ನಿಮಗೆ ನೆನಪಿದೆ. ಆದರೆ ನಾವು ನಿಮ್ಮ ಕೆಲಸವನ್ನು ಮಾಡಿದ ಕಾರಣ ಪೊಲೀಸರು ನಮ್ಮನ್ನು ಬಂಧಿಸಿ ಪೊಲಿಸ್ ಠಾಣೆಗೆ ಕರೆದುಕೊಂಡು ಹೋಗಿರುವ ವಿಷಯವು ನಿಮಗೆ ತಿಳಿದಿದೆ ಎಂದು ಎಚ್.ಎಂ. ವೆಂಕಟೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿ ಫ್ಲೆಕ್ಸ್ ಗಳ ಅಳವಡಿಕೆ ಮುಂದುವರಿದಲ್ಲಿ ಮತ್ತು ಅದನ್ನು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸಾಧ್ಯವಾಗದೇ ಇದ್ದಲ್ಲಿ ಸಾಮಾಜಿಕ ಹೋರಾಟಗಾರರ ತಂಡವು ನಿಮ್ಮ ಕೆಲಸಗಳನ್ನು ಕೈಗೆತ್ತಿಕೊಂಡು ಫ್ಲೆಕ್ಸ್ ಗಳನ್ನು ತೆರವುಗೊಳಿಸುವುದು ಅಥವಾ ಹರಿದು ಹಾಕುವ ಅಭಿಯಾನವನ್ನು ಮತ್ತೊಮ್ಮೆ ಮಾಡಲು ನಾವು ಹಿಂಜರಿಯುವುದಿಲ್ಲ. ಅದಕ್ಕೆ ನಮಗೆ ಪೋಲಿಸ್ ರಕ್ಷಣೆಯ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.