ಮಂಡ್ಯ | ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣ : ಸಿಎಂ ಸಿದ್ದರಾಮಯ್ಯ ಸಂತಾಪ

ಸಿದ್ದರಾಮಯ್ಯ
ಬೆಂಗಳೂರು : ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟು ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದು ನೋವಾಯಿತು. ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ, ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಹಾಗೂ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೆ, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು.
ಈ ದುರ್ಘಟನೆಯಲ್ಲಿ ಮಡಿದ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಬೇರೆಡೆ ತಯಾರಿಸಿದ ಆಹಾರವನ್ನು ಸೇವಿಸುವ ಮುನ್ನ ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ನೀಡುವ ಮುನ್ನ ಹೆಚ್ಚು ಜಾಗೃತೆ ವಹಿಸಬೇಕು. ಅಜಾಗರೂಕತೆಗೆ ಅಮೂಲ್ಯ ಜೀವಗಳು ಬಲಿಯಾಗದಿರಲಿ ಎಂದು ಸಿಎಂ ಹೇಳಿದ್ದಾರೆ.