ದೇಶದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ : ಮಾವಳ್ಳಿ ಶಂಕರ್

Update: 2025-03-16 23:26 IST
ದೇಶದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ : ಮಾವಳ್ಳಿ ಶಂಕರ್
  • whatsapp icon

ಬೆಂಗಳೂರು : ಇವತ್ತಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಎಸ್‍ಸಿಎಂ ಹೌಸ್‍ನಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸೌಹಾರ್ದ ಕರ್ನಾಟಕದ ವತಿಯಿಂದ ಆಯೋಜಿಸಿದ್ದ‘ತ್ರಿಪುರ ಅಂದು ಇಂದು’ ಸಂವಾದದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ರಾಜ್ಯ ಸರಕಾರ ಬಜೆಟ್ ಮಂಡನೆ ಮಾಡುವಾಗ ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರಿಗೆ ಅನುದಾನವನ್ನು ನೀಡಿದ್ದಾರೆ. ಅವರ ಜನಸಂಖ್ಯೆಗೆ ಆ ಬಜೆಟ್ ತುಂಬಾ ಕಡಿಮೆಯೇ ಇದೆ. ಅದನ್ನು ಹಲಾಲ್ ಕಟ್ ಬಜೆಟ್ ಎನ್ನುವ ಮೂಲಕ ಪ್ರತಿಯೊಂದರಲ್ಲೂ ಧರ್ಮವನ್ನು ತರಲಾಗುತ್ತಿದೆ ಎಂದು ಹೇಳಿದರು.

ನಮ್ಮ ಪ್ರಾರಂಭದ ಹೋರಾಟದ ದಿನಗಳಲ್ಲೇ ಪಶ್ಚಿಮ ಬಂಗಾಳ, ಕೇರಳ, ತ್ರಿಪುರ ಇವುಗಳಲ್ಲಿ ಬದಲಾವಣೆ ಪರ್ವ ಆರಂಭವಾಗಿತ್ತು. ಮುಂದಿನ ದಿನಗಳಲ್ಲಿ ಇಡೀ ದೇಶ ಆ ರೀತಿಯ ಸಮಾನತೆಯ ಹೆಜ್ಜೆಗಳನ್ನು ಇಡುತ್ತೆ ಎನ್ನುವ ಬಹುದೊಡ್ಡ ಆಸೆಯನ್ನು ಇಟ್ಟುಕೊಂಡಿದ್ದೆವು. ಆದರೆ ಅದು ಹುಸಿಯಾಗಿದೆ ಎಂದು ತಿಳಿಸಿದರು.

ಕಳೆದ 15 ವರ್ಷಗಳಲ್ಲಿ ದೇಶ ಯಾವ ದಿಕ್ಕಿನ ಕಡೆ ಹೋಗುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒರಿಸ್ಸಾದಲ್ಲಿ 1999ರಲ್ಲಿ ಜನರಿಗಾಗಿ ಕೆಲಸ ಮಾಡುತ್ತಿದ್ದ ಒಂದು ಕುಟುಂಬಕ್ಕೆ ಬೆಂಕಿ ಹಾಕಿ ಸುಡಲಾಯಿತು. ಅದರ ಹಿಂದೆ ಇದ್ದಿದ್ದು ಬಜರಂಗದಳವಾಗಿತ್ತು. ಈಗ ಮಣಿಪುರ ಹತ್ತಿ ಉರಿಯುತ್ತಿದೆ. ಮಹಿಳೆಯರನ್ನು ಬೆತ್ತಲೆಗೊಳಿಸಲಾಗುತ್ತಿದೆ ಆದರೆ, ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳಲಾಗುತ್ತಿದೆ. ಇಂತಹ ವಿಪರ್ಯಾಸಗಳ ನಡುವೆ ನಾವು ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಇರುವ ಬುಡಕಟ್ಟು ಸಮುದಾಯಗಳನ್ನು ಯಾವ ರೀತಿಯಲ್ಲಿ ಕೋಮುವಾದೀಕರಣಗೊಳಿಸಲಾಗುತ್ತಿದೆ ಎನ್ನುವುದನ್ನು ಹಾಗೂ ಅಲ್ಲಿನ ರಾಜಕೀಯ ವಾತಾವರಣವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಆದಿವಾಸಿ ಅಧಿಕಾರ ರಾಷ್ಟ್ರೀಯ ಮಂಚ್‍ನ ರಾಷ್ಟ್ರೀಯ ಅಧ್ಯಕ್ಷ ಜಿತೇಂದ್ರ ಚೌಧುರಿ ಸಂವಾದ ನಡೆಸಿದರು. ಪತ್ರಕರ್ತೆ ಮಂಜುಶ್ರೀ ಕಡಕೋಳ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಎಸ್.ವೈ.ಗುರುಶಾಂತ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News