ಬೆಂಗಳೂರು | ಹೋಳಿ ಪಾರ್ಟಿಯ ಬಳಿಕ ಜಗಳ : ಮೂವರು ಯುವಕರ ಹತ್ಯೆ ; ಓರ್ವನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಲು ಬಂದ ಮೂವರು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಂಗಳೂರಿನ ಸರ್ಜಾಪುರ- ಬಾಗಲೂರು ರಸ್ತೆಯ ತಿಂಡ್ಲು ಗೇಟ್ ಬಳಿ ನಡೆದಿದೆ.
ಬಿಹಾರ ಮೂಲದ ಅನ್ಸು(22) ರಾಧೆ ಶ್ಯಾಮ್(23) ಹಾಗೂ ದೀಪು ಮೃತಪಟ್ಟವರು ಎಂದು ತಿಳಿದುಬಂದಿದೆ. ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಿರ್ಮಾಣ ಹಂತದಲ್ಲಿರುವ ಪೋರ್‌ವಾಲ್ ಅವೆನ್ಯೂ ಅಪಾರ್ಟ್ ಮೆಂಟ್‌ನ 3ನೇ ಮಹಡಿಯಲ್ಲಿ ಘಟನೆ ನಡೆದಿದ್ದು, ಬಿಹಾರ ಮೂಲದ 6 ಮಂದಿ ಫ್ಲಂಬಿಂಗ್ ಕೂಲಿ ಕಾರ್ಮಿಕರು ಹೋಳಿ ಹಬ್ಬ ಇದ್ದ ಕಾರಣ 3 ದಿನಗಳ ಕಾಲ ಕೆಲಸಕ್ಕೆ ರಜೆಯಿದ್ದು, ಆಚರಣೆಯಲ್ಲಿ ತೊಡಗಿಕೊಂಡಿದ್ದರು. ನಂತರ ಎಲ್ಲರೂ ಒಂದೇ ಕೋಣೆಯಲ್ಲಿ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಅವರವರ ನಡುವೆ ಜಗಳ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಯುವಕರು ಮೂವರನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
3ನೇ ಮಹಡಿಯಲ್ಲಿ ಒಂದು ಕೋಣೆಯಲ್ಲಿ 2 ಮೃತದೇಹ ಮತ್ತೂಂದು ಕೋಣೆಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಕೂಡಲೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಿಕ್ಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಸಿ.ಕೆ ಬಾಬಾ ಮಾತನಾಡಿ, ಇದೊಂದು 14 ಮಹಡಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದೆ. ಸಂಜೆಯಷ್ಟೇ ಈ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಒಟ್ಟಾರೆ ನಮಗೆ 3 ಮೃತದೇಹಗಳು ದೊರೆತಿದೆ. ಇವರೆಲ್ಲರೂ ಫ್ಲಂಬಿಂಗ್ ಮತ್ತಿತರ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದಿದ್ದಾರೆ.
ಹೋಳಿ ಹಬ್ಬದ ಪ್ರಯುಕ್ತ 3 ದಿನ ರಜೆ ನೀಡಲಾಗಿತ್ತು. ಈ ವೇಳೆ ಮೂವರೂ ತಮ್ಮ 3-4 ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಆಯೋಜಿಸಿದ್ದರು. ಬಂದಿದ್ದವರ ಪೈಕಿ ಒಬ್ಬಾತ ಗೆಳೆಯನ ಅಕ್ಕನ ಜೊತೆಗೆ ಫೋನಿನಲ್ಲಿ ಮಾತನಾಡಿದ್ದೆ ಜಗಳಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಮೂವರು ಸ್ಥಳದಲ್ಲಿದ್ದ ರಾಡ್ ಮತ್ತು ಬಾಟಲ್‌ಗಳಿಂದ ಹಲ್ಲೆ ನಡೆಸಿದ್ದಾರೆ. ನಾವು ಬಂದಾಗ ಇಬ್ಬರು ಮೃತಪಟ್ಟಿದ್ದರು. ಒಬ್ಬನನ್ನು ಆಂಬ್ಯುಲೆನ್ಸ್ ನಲ್ಲಿ ಹಾಕುವಾಗ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.
ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.