ಅತಿ ಕಾಮ ಅತಿರೇಖವಾದದ್ದು, ಮನುಷ್ಯನ ಶ್ರೇಯಸ್ಸಿಗೆ ಪೂರಕವಲ್ಲ : ಡಾ.ಬಂಜಗೆರೆ ಜಯಪ್ರಕಾಶ್

Update: 2025-03-17 00:03 IST
ಅತಿ ಕಾಮ ಅತಿರೇಖವಾದದ್ದು, ಮನುಷ್ಯನ ಶ್ರೇಯಸ್ಸಿಗೆ ಪೂರಕವಲ್ಲ : ಡಾ.ಬಂಜಗೆರೆ ಜಯಪ್ರಕಾಶ್
  • whatsapp icon

ಬೆಂಗಳೂರು : ಕಾಮ ಎನ್ನುವುದು ಚಿವಿಂಗ್ ಗಮ್ ರೀತಿ. ಮೊದಲು ಜಿಗಿಯುವಾಗ ಚೆನ್ನಾಗಿರುತ್ತದೆ. ಅದೇ ರೀತಿ ಅತಿ ಕಾಮ ಅತಿರೇಖವಾದದ್ದು, ಇದು ಮನುಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ಎಂದು ಲೇಖಕ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪುರುಷೋತ್ತಮ ದಾಸ್ ಹೆಗ್ಗಡೆ ಅವರ “ಯಯಾತಿ” ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಯಾತಿ ಎಲ್ಲಾ ಕಾಲಕ್ಕೂ ಸರ್ವಶ್ರೇಷ್ಠ ವಸ್ತುವಾಗಿದ್ದು, ಎಲ್ಲಾ ಕಾಲಘಟ್ಟದಲ್ಲೂ ಯಯಾತಿ ಪಾತ್ರಧಾರಿಗಳನ್ನು ಕಾಣಬಹುದು ಎಂದರು.

ಎಲ್ಲಿ ಸಮರಸ್ಯದ ದಾಂಪತ್ಯ ಇರುವುದಿಲ್ಲವೋ ಅಲ್ಲಿ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಹೆಣ್ಣು ಗಂಡು ನಡುವಿನ ಪ್ರೇಮ ಮೊದಲಿಗೆ ಆಕರ್ಷಣೆಯಾದರೂ ಕ್ರಮೇಣ ಗೌರವ, ಪರಸ್ಪರ ವಿಶ್ವಾಸ ಮೂಡುವಂತಾಗಬೇಕು. ಆರೈಕೆಯ ಭಾವನೆಯ ಜೊತೆಗೆ ಸಂಬಂಧ ಮಾಗುತ್ತಾ ಮಾಗುತ್ತಾ ಪ್ರೌಢವಾಗುತ್ತಾ ಸಾಗಬೇಕು. ಇಲ್ಲವಾದಲ್ಲಿ ಒಲುಮೆಗಿಂತ ಸಂಘರ್ಷ ಜಾಸ್ತಿಯಾಗುತ್ತದೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.

ಯಯಾತಿ ಒಂದು ಪಾತ್ರವಲ್ಲ. ಎಲ್ಲರಿಗೂ ಒಂದು ಪಾಠ. ಯಾವುದೇ ಪತ್ರಿಕೆಯಲ್ಲೂ ಕಾಮಶಕ್ತಿ ಉದ್ದೀಪಿಸುವ ವಿಷಯ ಇರುತ್ತದೆ. ಅಂತರ್ಜಾಲದಲ್ಲೂ ಪದೇ ಕಾಮೋತ್ತೇಜಕ ವಿಷಯಗಳೇ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಕಾಮ ಮನುಷ್ಯನ ಹಂಬಲ ಹೆಚ್ಚಿಸುತ್ತದೆ. ನಾವು ಯೌವ್ವನವನ್ನು ಬೇಗ ಆಹ್ವಾನಿಸುತ್ತೇವೆ. ಆದರೆ ಮುಪ್ಪನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಇದು ಮುನುಷ್ಯನ ಮನೋರೋಗ ಎಂದು ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಈ ಕಾದಂಬರಿಯಲ್ಲಿ ಯಯಾತಿಯನ್ನು ಲೇಖಕರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಕಾಮವನ್ನೇ ಗೆದ್ದ ಯತಿ ಇದ್ದಾನೆ, ಕಾಮವನ್ನೇ ಸದಾ ಬಯಸುವ ಯಯಾತಿ ಇದ್ದಾನೆ ಎಂಬ ಲೇಖಕರ ವಿಚಾರಗಳು ಇಡೀ ವೃತ್ತಾಂತವನ್ನು ಅನಾವರಣಗೊಳಿಸುತ್ತವೆ. ಮೂರನೆಯ ಅಭೀಪ್ಸೆ ಎಂದರೆ ಎಲ್ಲಾ ವಸ್ತುಗಳನ್ನು ಮುಟ್ಟಿ ಚಿನ್ನ ಮಾಡುವ ವಾಂಛೆ. ಎಲ್ಲವೂ ಸುವರ್ಣಮಯವಾಗಬೇಕು. ನಮ್ಮಲ್ಲೇ ಇದು ಸಂಗ್ರಹವಾಗಬೇಕು ಎಂಬುದು. ಇದು ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಪ್ರಕೃತಿ ನೀಡುವ ಉತ್ತರ ಮುಖ್ಯವಾಗುತ್ತದೆ. ಜನಾಂಗೀಯ ಸಂಘರ್ಷಗಳ ಬಗ್ಗೆಯೂ ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.

ಕೃತಿ ಕುರಿತು ಮಾತನಾಡಿದ ವಿಮರ್ಶಕ ಎಚ್.ದಂಡಪ್ಪ, ನಾವು ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯ ಮಾಡುವ ಸತ್ಯೋತ್ತರ ಕಾಲದಲ್ಲಿದ್ದು, ಈಗಲೂ ನಮ್ಮ ಮುಂದೆ ಯಯಾತಿಗಳಿದ್ದಾರೆ. ಇಂತಹವರನ್ನು ಯಯಾತಿ ಕಾಂಪ್ಲೆಕ್ಸ್‌ ಗಳು ಎಂದು ಕರೆಯುತ್ತಾರೆ. ಈಡಿಪಸ್ ಕಾಂಪ್ಲೆಕ್ಸ್ ರೀತಿ ಇವರೆಲ್ಲರೂ ಕಾಮ ಪಿಶಾಚಿಗಳು ಎಂದರು.

ನಿಮ್ಹಾನ್ಸ್‌ ನ ಮಾನಸಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಮಂಜುಳಾ ಮಾತನಾಡಿ, ಮನೋವಿಜ್ಞಾನದ ಸಿದ್ಧಾಂತಗಳನ್ನು ಯಯಾತಿ ಕಥೆಯಲ್ಲಿ ಸೂಕ್ತ ರೀತಿಯಲ್ಲಿ ಅಡಕಗೊಳಿಸಲಾಗಿದೆ. ನಾನಾ ಆಯಾಮಗಳಲ್ಲಿ ಲೇಖಕರು ಮಾನಸಿಕ ಸ್ಥಿತಿಗತಿಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಕಥಾ ವಸ್ತುವಿನಲ್ಲಿ ಮಾನವೀಕರಣವನ್ನು ಕಾಣಬಹುದಾಗಿದೆ. ಇಷ್ಟವಾಗದ ವಿಷಯಗಳ ವಿಚಾರದಲ್ಲಿ ಸಿಗ್ಮಂಡ್ ಫ್ರಾಯ್ಡ್‌ ನ ಸಿದ್ಧಾಂತಗಳನ್ನು ಸಹ ಅನಾರಣಗೊಳಿಸಲಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ರಕ್ಷಣಾ ವಿಧಾನಗಳಿಗೂ ಇಲ್ಲಿ ಒತ್ತು ನೀಡಲಾಗಿದೆ ಎಂದರು.

ಕಾದಂಬರಿಕಾರ ಪುರುಷೋತ್ತಮ ದಾಸ್ ಹೆಗ್ಗಡೆ ಮಾತನಾಡಿ, ಮನುಷ್ಯನಿಗೆ ಸಾವಿನ ಬಗ್ಗೆ ಅತಿ ಹೆಚ್ಚು ಭಯವಿದ್ದು, ಇತ್ತೀಚೆಗೆ ಈ ಕುರಿತು 3 ಲಕ್ಷಕ್ಕೂ ಅಧಿಕ ಲೇಖನಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಮನುಷ್ಯನ ಚಿರ ಯೌವ್ವನ ಕಾಪಾಡಲು 700ಕ್ಕೂ ಅಧಿಕ ನವೋದ್ಯಮ ಕಂಪೆನಿಗಳು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಪ್ರೋಟಿನ್‍ಗಳ ಮೂಲಕ ಯವ್ವನವನ್ನು ಕಾಪಿಟ್ಟುಕೊಳ್ಳುವ, ಮಕ್ಕಳು, ಮೊಮ್ಮಕ್ಕಳ ರಕ್ತ, ಪ್ಲೇಟ್ಲೇಟ್‍ಗಳನ್ನು ವರ್ಗಾಯಿಸಿಕೊಂಡು ಯೌವ್ವನಿಗರಾಗುವ ಕೆಲಸ ನಡೆಯುತ್ತಿದೆ. ಇಂತಹ ವ್ಯಕ್ತಿತ್ವದವರನ್ನು ಯಯಾತಿ ಸಿಂಡ್ರೋಮ್‍ಗಳು ಎನ್ನಲಾಗುತ್ತದೆ. ಈ ವಲಯದಲ್ಲಿರುವವರನ್ನು ಅಮರತ್ವದ ವ್ಯಾಪಾರಿಗಳು ಎಂದು ಕರೆಯಲಾಗುತ್ತದೆ. ಹೀಗಾಗಿ ಯಯಾತಿಗಳು ನಮ್ಮ ಮುಂದೆ ಈಗಲೂ ಇದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಂಶಿ ಪ್ರಕಾಶನದ ಪ್ರಕಾಶ್ ಉಪಸ್ಥಿತರಿದ್ದರು.

ಕಾಮ ಎನ್ನುವುದು ಸ್ಪರ್ಧೆಯಲ್ಲ; ಪರಸ್ಪರ ಒಲಿದು ನಡೆಸುವ ಅನುಭೂತಿ..!

ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಮೂರು ಅಭೀಪ್ಸೆಗಳು ಇರುತ್ತವೆ. ನನಗೆ ಮುಪ್ಪು ಬರಬಾರದು ಎನ್ನುವುದು. ಯೋಗ ಶಾಸ್ತ್ರವೂ ಕೂಡ ದೇಹವನ್ನು ವಜ್ರಕಾಯ ಮಾಡಿಕೊಳ್ಳುವ ಸಿದ್ದಿ ವಿದ್ಯೆಯಾಗಿದೆ. ಚಿರ ಯೌವ್ವನಿಗನಾಗಿರಬೇಕು ಎಂದು ಬಯಸುವುದು ಸಹಜ. ಎರಡನೆಯದು ಕಾಮ. ಅತಿ ಕಾಮ ನಪುಂಸಕತ್ವಕ್ಕೂ ಕಾರಣವಾಗುತ್ತದೆ. ಆದರೆ ಮಾಂಸಹಾರಿಗಳು ಪ್ರಾಣಿಗಳ ವೃಷಣಗಳನ್ನೂ, ಸಸ್ಯಹಾರಿಗಳು ನುಗ್ಗೆ ಕಾಯಿಯನ್ನೂ ತಿಂದರೆ ಕಾಮ ಉತ್ತೇಜನವಾಗುತ್ತದೆ ಎನ್ನುವ ನಂಬಿಕೆ ಇದೆ. ಕಾಮ ಎನ್ನುವುದು ಸ್ಪರ್ಧೆಯಲ್ಲ. ದೇಹದ ಮೂಲಕ ಆಡುವ ಆಟವೂ ಅಲ್ಲ. ಪರಸ್ಪರ ಒಲಿದು ನಡೆಸುವ ಅನುಭೂತಿ. ಸಾಂಸರಿಕ ಜೀವನದ ಹೊರಗಡೆ ನಡೆಯುವ ಇಂತಹ ಕ್ರಿಯೆಗಳಿಗೆ ಯಯಾತಿ ಕಥೆ ಪ್ರಸ್ತುತವಾಗುತ್ತದೆ ಎಂದು ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News