ಜಾಣಗೆರೆ ಪತ್ರಕರ್ತರಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಿದವರು: ಪ್ರೊ.ಬರಗೂರು

ಬೆಂಗಳೂರು : ಪತ್ರಕರ್ತರಿಗೆ, ಹೋರಾಟಗಾರರಿಗೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟದ ಸಂಗತಿ. ಆದರೆ, ಜಾಣಗೆರೆ ವೆಂಕಟರಾಮಯ್ಯ ಪತ್ರಕರ್ತ ಮತ್ತು ಹೋರಾಟಗಾರನಾಗಿದ್ದುಕೊಂಡೇ ಬರವಣಿಗೆಯಲ್ಲಿ ತೊಡಗಿಸಿಕೊಂಡು ಎಲ್ಲ ಒತ್ತಡಗಳನ್ನು ಮೀರಿ ಸಾಹಿತ್ಯ ಕ್ಷೇತ್ರದಲ್ಲಿ ನೆಲೆಯೂರಿದವರು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ‘ಜಾಣಗೆರೆ ಪತ್ರಿಕೆ ಪ್ರಕಾಶನ’ದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ರಚಿಸಿರುವ ‘ನುಡಿಗೋಲು-2 ಅಪೂರ್ವ ಸಾಧಕರ ನುಡಿ ಸಂಕಥನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಕಡಿಮೆ ಬರೆಯುತ್ತಾರೆ ಎನ್ನುವುದು ಹಲವರಲ್ಲಿನ ಭಾವನೆ. ಪತ್ರಿಕಾ ರಂಗದಲ್ಲಿರುವವರಿಗೆ ಒತ್ತಡದ ಕಾರಣ ಬರವಣಿಗೆ ಕಡಿಮೆ ಎನ್ನುತ್ತಾರೆ. ಅದೇ ರೀತಿಯಲ್ಲಿ ಹೋರಾಟಗಾರರಿಗೂ ಹಲವು ಸಮಸ್ಯೆಗಳಿರುತ್ತವೆ. ಆದರೆ, ಜಾಣಗೆರೆ ವೆಂಕಟರಾಮಯ್ಯ ಶ್ರಮದಿಂದ ಸಾಹಿತ್ಯಕಾರರಾದವರು ಎಂದು ನುಡಿದರು.
ವ್ಯಕ್ತಿ ಚಿತ್ರ ಬರೆಯುವಾಗ ಇಬ್ಬರು ವ್ಯಕ್ತಿಗಳಿರುತ್ತಾರೆ. ಬರೆಯುವರು, ಮತ್ತೊಂದು ಬರೆಸಿಕೊಳ್ಳುವರು. ಯಾವುದೇ ವ್ಯಕ್ತಿ ಚಿತ್ರಗಳನ್ನು ಯಾರೇ ಬರೆದರೂ ಪರಿಪೂರ್ಣ ಎಂದು ಹೇಳುವುದಕ್ಕೆ ಆಗುವುದಿಲ್ಲ. ಜಾಣಗೆರೆ ಬರೆದಿರುವ ವ್ಯಕ್ತಿತ್ವಗಳು ಸಕಾರಾತ್ಮಕ ಗುಣಗಳನ್ನು ಮತ್ತು ಸಾಧನೆಗಳನ್ನು ಗುರುತಿಸಿ ಬರೆದಿದ್ದಾರೆ. ನೇರ ಪರಿಚಯದಿಂದ ಬರೆಯುವಂತದ್ದು, ಪರಿಚಯವಿಲ್ಲದೇ ಅಧ್ಯಯನದಿಂದ ಬರೆಯುವಂತದ್ದು. ಒಡನಾಟದಿಂದ ಬರೆಯುವ ವ್ಯಕ್ತಿ ಚಿತ್ರದಲ್ಲಿ ಅನುಭವದ ಸಂವೇದನೆ ಇರುತ್ತದೆ. ಒಡನಾಟ ಇಲ್ಲದೇ ಅಧ್ಯಯನದಿಂದ ಹುಟ್ಟುವ ವ್ಯಕ್ತಿ ಚಿತ್ರದಲ್ಲಿ ಅರಿವಿನ ಸಹಯೋಜನೆ ಇರುತ್ತದೆ ಎಂದು ಬರಗೂರು ತಿಳಿಸಿದರು.
ಜಾಣಗೆರೆ ಬರೆದಿರುವ ವ್ಯಕ್ತಿಚಿತ್ರಗಳು ಅನುಭವ ಇರುವಂತ ಚಿತ್ರಗಳೆ ಆಗಿವೆ. ಯಾವುದೇ ವ್ಯಕ್ತಿ ಚಿತ್ರಗಳು ಅವರ ಅನುಭವ, ಅರಿವು, ಅನುಸಂಧಾನ ಮತ್ತು ದೃಷ್ಟಿಕೋನದಿಂದ ಹುಟ್ಟಿಕೊಳ್ಳುತ್ತದೆ. ಕೃತಿಯಲ್ಲಿ ಎಲ್ಲ ವ್ಯಕ್ತಿ ಚಿತ್ರಣಗಳು ಅವರ ಅಂತರಂಗ, ಬಹಿರಂಗಗಳನ್ನು ಹಿಡಿದಿಟ್ಟುಕೊಂಡು ಹೋಗುವುದರ ಜೊತೆಗೆ, ಸಕಾರಾತ್ಮ ಗುಣಲಕ್ಷಣಗಳಿಂದ ಪ್ರಾಮಾಣಿಕವಾದ, ಕಂಡದ್ದನ್ನು ಕಂಡಹಾಗಿರುವ ಚಿತ್ರಣಗಳನ್ನು ನೋಡಬಹುದು. ಅಷ್ಟೇ ಅಲ್ಲದೇ ಅಪ್ರಸಿದ್ಧ ವ್ಯಕ್ತಿ ಚಿತ್ರಣಗಳನ್ನು ಕಟ್ಟುಕೊಟ್ಟಿದ್ದಾರೆ. ಸಾಮಾಜಿಕ ಇತಿಹಾಸದಲ್ಲಿ ಎಷ್ಟೋ ಜನ ಪ್ರಸಿದ್ಧರಾಗದೇ ಕ್ರಿಯಾಶಿಲಾರಾಗಿದ್ದವರನ್ನು ಮರೆತು ಹೋಗುತ್ತಾರೆ ಎಂದರು.
ಕೃತಿಯ ವಿಶಿಷ್ಟತೆ ಎಂದರೆ ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿತ್ವಗಳನ್ನು ಚಿತ್ರಿಕರಿಸಿದ್ದಾಗಿದೆ. ಇದೆಲ್ಲವನ್ನೂ ನೋಡಿದಾಗ ಜಾಣಗೆರೆಯವರ ಜಾತ್ಯಾತೀತ ಮನೋಭಾವ ಎದ್ದು ಕಾಣುತ್ತದೆ. ಕರ್ನಾಟಕ ಸಮಾಜ ಜಾತಿ, ಧರ್ಮ, ದ್ವೇಷಗಳನ್ನು ಮೀರಿ ಬೆಳೆದಿದ್ದು. ಕೃತಿಯಲ್ಲಿ ಅನೇಕ ಹೋರಾಟಗಾರರ ಚಿತ್ರಣವಿದೆ. ವ್ಯಕ್ತಿಗಳ ಪರಿಚಯದ ಜೊತೆಗೆ ಕರ್ನಾಟಕದ ವಿವಿಧ ಹೋರಾಟಗಳ ಇತಿಹಾಸದ ಕೆಲವು ಪುಟಗಳನ್ನು ಕಾಣಬಹುದು. ರೈತ ಚಳವಳಿ ಮತ್ತು ಕನ್ನಡ ಚಳವಳಿಯ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಬರವಣಿಗೆಯಲ್ಲಿ ಎಲ್ಲೂ ಉದ್ರೇಕ ಇಲ್ಲ ಎಂದು ಬರಗೂರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ.ಅಗ್ರಹಾರ ಕೃಷ್ಣಮೂರ್ತಿ, ಪತ್ರಕರ್ತ ಜಾಗಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.