ಕಾಂಗ್ರೆಸ್ ಸರಕಾರ ಎಂದಿಗೂ ಮಹಿಳೆಯರ ಪರ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳು ಮನೆ ಮನೆ ತಲುಪುತ್ತಿವೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯರ ಏಳಿಗೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಇಂದಿರಾ ಗಾಂಧಿ ಭವನದ ಭಾರತ ಜೋಡೋ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರ ಪರ ಇರುವ ಪಕ್ಷ, ಮಹಿಳೆಯರ, ಯುವಕರ, ವೃದ್ಧರ ಹೀಗೆ ಎಲ್ಲರಿಗೂ ಸಲ್ಲುವ ಪಕ್ಷ ಕಾಂಗ್ರೆಸ್ ಪಕ್ಷ. ಎಲ್ಲರಿಗೂ ಅನ್ನ, ಅಕ್ಷರ, ವಿದ್ಯೆಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆಯಾಗಿರಬಹುದು. ಯಾರೂ ಧೈರ್ಯಗೇಡಬೇಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಲಿದೆ ಎಂದು ಅವರು ಹೇಳಿದರು.
ಮಹಿಳೆಯರು ಇವತ್ತು ಯಾವುದರಲ್ಲೂ ಹಿಂದೆ ಇಲ್ಲ. ಸಮಾಜದಲ್ಲಿ ಮಹಿಳೆಯರನ್ನು ಬಿಟ್ಟು ಇರುವುದಕ್ಕೂ ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ಜಾರಿಗೆ ಬಂದರೆ, ಕರ್ನಾಟಕ ವಿಧಾನಸಭೆಯಲ್ಲಿ 70 ರಿಂದ 78 ಶಾಸಕಿಯರು ಇರಲಿದ್ದಾರೆ. ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಬದ್ಧತೆಗೆ ಹೆಸರಾಗಿರುವ ಪಕ್ಷ. ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅತಿ ದೊಡ್ಡ ಯೋಜನೆಯಾಗಿದೆ. 1.22 ಕೋಟಿ ಫಲಾನುಭಗಳಿಗೆ ಇದುವರೆಗೂ 34 ಸಾವಿರ ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಈ ಯೋಜನೆಯನ್ನು ಜಾರಿಗೆ ತಂದಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಅವರು ಹೇಳಿದರು.
1999ರಲ್ಲಿ ನಾನು ಕೂಡ ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡೆ. ನಮ್ಮ ಹಿರಿಯ ನಾಯಕಿ ಮಾರ್ಗರೇಟ್ ಅಳ್ವ ಅವರೇ ನನಗೆ ಸ್ಫೂರ್ತಿ. ಹಂತ ಹಂತವಾಗಿ ಮೇಲೆ ಬಂದು ಇಂದು ಸರಕಾರದಲ್ಲಿ ಸಚಿವರಾಗಿರುವೆ. ಕಾಂಗ್ರೆಸ್ ಪಕ್ಷ ಸಾಮಾನ್ಯರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.