ಬಿಜೆಪಿ ಕಾರ್ಯಕ್ರಮ ಅಂದುಕೊಂಡಿದ್ದೀರಾ?: ಪ್ರದೀಪ್ ಈಶ್ವರ್ ಪ್ರಶ್ನೆ

ಬೆಂಗಳೂರು : ಇದೇನು ಬಿಜೆಪಿ ಕಾರ್ಯಕ್ರಮ ಅಂದುಕೊಂಡಿದ್ದೀರಾ? ಕಾಂಗ್ರೆಸ್ ಸರಕಾರ ಇರುವುದು, ಬಿಜೆಪಿ ಗುಣಗಾನ ಮಾಡುವುದನ್ನು ಬಿಡಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಯೋಗಿ ನಾರಾಯಣ ಯತೀಂದ್ರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಗಾಂಧಿ ನಗರದ ಟಿ.ಕೆ.ಸುರೇಶ್ ಎಂಬವರ ವಿರುದ್ಧ ಹರಿಹಾಯ್ದರು.
ಇದೇನು ಬಿಜೆಪಿ ಕಾರ್ಯಕ್ರಮ ಅಲ್ಲ. ಬಿಜೆಪಿ ಗುಣಗಾನ ಮಾಡುವುದನ್ನು ಬಿಡಬೇಕು ಇಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯರ ಸರಕಾರ ಇರುವುದು. ನಿಮ್ಮಪ್ಪನ ಸರಕಾರ ಅಲ್ಲ. ಇದು ಸಿದ್ದರಾಮಯ್ಯರ ಕಾರ್ಯಕ್ರಮ. ಗೆಟ್ ಲಾಸ್ಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯನ್ನು ಗುಣಗಾನ ಮಾಡಬೇಡಿ, ನಮಗೂ ನಮ್ಮ ಪಕ್ಷದ ಸಿದ್ಧಾಂತ ಇರುತ್ತದೆ. ನೀವು ನಿಮ್ಮ ಪಕ್ಷವನ್ನು ಗುಣಗಾನ ಮಾಡಿದರೆ ನಾವು ನಮ್ಮ ಪಕ್ಷವನ್ನು ಗುಣಗಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಸೀತಾರಾಂ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ವೇಣಿಗೋಪಾಲ್ ಮತ್ತಿತರರು ಹಾಜರಿದ್ದರು.
ನಾನು ಬಿಜೆಪಿ ಸಂಸದ, ಇರಬೇಕೋ, ಬೇಡವೋ?
ಇದು ಸಿದ್ದರಾಮಯ್ಯರ ಪ್ರೋಗಾಂ ಎಂದು ಹೇಳಿದ ಪ್ರದೀಪ್ ಈಶ್ವರ್ ಅವರ ಮಾತಿಗೆ ಕೆರಳಿದ ಸಂಸದ ಪಿ.ಸಿ.ಮೋಹನ್, ನಾನು ಬಿಜೆಪಿ ಸಂಸದ ಇಲ್ಲಿ ಇರಬೇಕಾ ಬೇಡವೇ? ಎಂದು ಎಂದು ಆಕ್ರೋಶಭರಿತವಾಗಿ ಏರುಧ್ವನಿಯಲ್ಲಿ ಪ್ರಶ್ನಿಸಿದರು. ವಾಗ್ವಾದ ಹೆಚ್ಚಾಗುತ್ತಿದ್ದಂತೆ ಪ್ರದೀಪ್ ಈಶ್ವರ್ ಅವರು ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೊರನಡೆದರು.