2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಿ : ಮಹಿಳಾ ಕಾಂಗ್ರೆಸ್ ಸಮಿತಿಗೆ ಡಿ.ಕೆ.ಶಿವಕುಮಾರ್ ಕರೆ

ಬೆಂಗಳೂರು : ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಇಂದಿರಾ ಗಾಂಧಿ ಭವನದ ಭಾರತ ಜೋಡೋ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ನಾವು 10-12 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ. ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಹಂಚಿಕೆ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ ಎಂದು ಅವರು ಹೇಳಿದರು.
ಮಾ.11ರಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ಮಹಿಳೆಯರು ಹಾಗೂ ಯುವಕರಿಂದ ಮಾತ್ರ ಭವಿಷ್ಯ ಎಂದು ನಾನು ಅಧಿಕಾರ ಸ್ವೀಕರಿಸಿದ ದಿನ ಹೇಳಿದ್ದೆ. ಅದರಂತೆ, ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು ಎಂದು ಶಿವಕುಮಾರ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಗೂ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದರು. ಆದರೆ ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳೆ ನಮ್ಮ ಯೋಜನೆಗಳನ್ನು ಅನುಸರಿಸುತ್ತಿವೆ. ನಾವು ಕಾರ್ಯಕರ್ತರಿಗಾಗಿ ಗ್ಯಾರಂಟಿ ಸಮಿತಿ ರಚಿಸಿದ್ದೇವೆ. ಇದರ ವಿರುದ್ಧ ಅಧಿವೇಶನದಲ್ಲಿ ವಿಪಕ್ಷದವರು ವಾಗ್ದಾಳಿ ನಡೆಸಿದರು. ನಮ್ಮನ್ನು ಅಧಿಕಾರಕ್ಕೆ ತಂದಿರುವ ಕಾರ್ಯಕರ್ತರಿಗಾಗಿ ನಾವು ಸಮಿತಿಗಳನ್ನು ರಚನೆ ಮಾಡಿದ್ದೇವೆ. ಯಾರ ಹಕ್ಕನ್ನು ಕಸಿಯುತ್ತಿಲ್ಲ ಎಂದು ಮುಖ್ಯಮಂತ್ರಿ ಪ್ರತ್ಯುತ್ತರ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಪಕ್ಷಕ್ಕೆ ನಿಮ್ಮ ಕೊಡುಗೆ ಏನು? ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ರಾಣಿ ಸತೀಶ್ ಅವರ ಕಾಲದಿಂದ ಇಲ್ಲಿಯವರೆಗೂ ಮಹಿಳಾ ಕಾಂಗ್ರೆಸ್ ಬಗ್ಗೆ ನನಗೆ ತೃಪ್ತಿ ಇಲ್ಲ. ನೀವು ನಿಮ್ಮ ಒತ್ತಡಗಳ ಮಧ್ಯೆ ಪಕ್ಷ ಸಂಘಟನೆಗೆ ನನ್ನ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಆಗಿಲ್ಲ. ಇಂದು ಕೂಡ ಅವಕಾಶಗಳು ನಿಮ್ಮ ಮನೆ ಬಾಗಿಲ ಮುಂದಿದೆ ಎಂದು ಅವರು ಹೇಳಿದರು.
50 ಸದಸ್ಯೆಯರನ್ನು ನೋಂದಾಯಿಸಿದರೆ ನಿರ್ದೇಶಕ ಹುದ್ದೆ: ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕರಾವಳಿ ಭಾಗದಲ್ಲಿ ನಮ್ಮ ಶಾಸಕರು ಹೆಚ್ಚಾಗಿ ಗೆದ್ದಿಲ್ಲ. ಅಲ್ಲಿನ ಮಹಿಳೆಯರು ಈ ಯೋಜನೆಗಳ ಫಲಾನುಭವಿಗಳಾಗಿಲ್ಲವೇ? ನೀವು ಅವರ ಬಳಿ ಹೋಗಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ. ಈ ಪಕ್ಷವನ್ನು ಉಳಿಸಿಕೊಳ್ಳಿ ಎಂದು ಪಕ್ಷದ ಸದಸ್ಯತ್ವ ಅಭಿಯಾನ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.
ಸೋನಿಯಾ ಗಾಂಧಿ ದೇಶಕ್ಕಾಗಿ ತನ್ನ ಪತಿ, ಅತ್ತೆಯನ್ನು ಕಳೆದುಕೊಂಡರು. ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ರಾಜೀವ್ ಗಾಂಧಿ ಸತ್ತಾಗ ನರಸಿಂಹ ರಾವ್ ಅವರನ್ನು ಪ್ರಧಾನಿ ಮಾಡಿದರು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿ ನಾಯಕಿಯರಾದ ಉಮಾ ಭಾರತಿ, ಸುಷ್ಮಾ ಸ್ವರಾಜ್, ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದಾಗ, ಡಾ.ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ನೀಡಿದರು ಎಂದು ಅವರು ಹೇಳಿದರು.
ಮಹಿಳೆಯರು ಹೊಸ ಪೀಳಿಗೆ ತಯಾರು ಮಾಡದಿದ್ದರೆ ಬಹಳ ತೊಂದರೆಯಾಗಲಿದೆ. ಸೌಮ್ಯಾ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಬೇಕು ಎಂದು ಬಯಸಿರಲಿಲ್ಲ. ನಾನೇ ಆಕೆಗೆ ಈ ಜವಾಬ್ದಾರಿ ನೀಡಿದ್ದೇನೆ. ಈ ಬಗ್ಗೆ ಟೀಕೆ ಮಾಡುವವರು ಮಾಡಿಕೊಳ್ಳಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಸರಕಾರದ 2 ವರ್ಷದ ಸಂಭ್ರಮ ಆಚರಿಸಿ: ಇದೇ ಮೇ 20ರಂದು ಸರಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲೆ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸೊಬಗು ಸಾಮಾಜಿಕ ಸಂಸ್ಥೆ ವತಿಯಿಂದ ‘ಮಹಿಳಾ ಸಮಾನತೆ ಮತ್ತು ಸಮತೆ ಕಡೆಗೆ ನಾವು ನೀವು’ ಎಂಬ ಮಹಿಳಾ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. ಇನ್ನು 52 ದಿನಗಳ ಕಾಲ ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದ ಸ್ಪಾನಿಶ್ ದ್ವೀಪದಿಂದ ಆಂಟಿಗುವಾವರೆಗೂ 3 ಸಾವಿರ ಮೈಲು ದೂರವನ್ನು ದೋಣಿಯಲ್ಲಿ ಸಾಗಿದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿರುವ ಸಾಹಿತಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯಾ ಪ್ರಸಾದ್ ಅವರಿಗೆ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.