ದಲಿತ, ಕೆಳವರ್ಗದ ಜನರ ಮೇಲೆ ಯಾಕಿಷ್ಟು ಅಸಹನೆ: ಪರಿಷತ್‌ನಲ್ಲಿ ಪ್ರಿಯಾಂಕ್ ಖರ್ಗೆ ಗರಂ

ಬೆಂಗಳೂರು : ‘ನಾವು ಹಾಲಾದರೂ ಕುಡಿತಿವಿ, ನೀರಾದರೂ ಕುಡಿತಿವಿ ನಿಮಗೆ ಯಾಕೆ, ನಿಮ್ಮ ಚಿನ್ನಾಭರಣ ವ್ಯಾಪಾರ ಬಗ್ಗೆ ನಾವು ಪ್ರಶ್ನಿಸಿದ್ದೇವಾ?’ ಎಂದು ಜೆಡಿಎಸ್ ಸದಸ್ಯ ಟಿ.ಎ.ಶರವಣ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗರಂ ಆದ ಪ್ರಸಂಗ ನಡೆಯಿತು.
ಶುಕ್ರವಾರ ಪರಿಷತ್ತಿನಲ್ಲಿ ‘ಪ್ರಿಯಾಂಕ್ ಖರ್ಗೆಯವರು ಹಾಲು ಕುಡಿದಷ್ಟು, ನಾನು ನೀರು ಕುಡಿದಿಲ್ಲ' ಎಂಬ ಜೆಡಿಎಸ್ ಸದಸ್ಯ ಟಿ.ಎ.ಶರವಣ ಉಲ್ಲೇಖಿಸಿದರು. ಇದರಿಂದ ಕೆರಳಿದ ಸಚಿವ ಪ್ರಿಯಾಂಕ್ ಖರ್ಗೆ, ‘ನನ್ನ ಬಗ್ಗೆ ಇವರಿಗೆಲ್ಲ ಅಸಹನೆ ಯಾಕೆ, ಇವರಿಗೆ ಬಡ ಕುಟುಂಬದ, ಸಮುದಾಯದ ಬಗ್ಗೆ ಅಸಹನೆಯಿದೆ. ಮೇಲ್ಮನೆ, ಕೆಳಮನೆಯಲ್ಲೂ ಅದೇ ಮಾತು ಕೇಳಿಬರುತ್ತಿದೆ. ದಲಿತ, ಕೆಳವರ್ಗದ ಜನರ ಮೇಲೆ ಯಾಕಿಷ್ಟು ಅಸಹನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಇಲ್ಲಿ ಯಾರ ಮರ್ಜಿ, ಮುಲಾಜಿನಲ್ಲಿ ಬಂದಿಲ್ಲ, ಅರ್ಹತೆ ಮೇಲೆ ಬಂದಿದ್ದೇನೆ. ಸಂವಿಧಾನ ನೀಡಿದ ಹಕ್ಕಿನಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದಿದ್ದೇನೆ. ನಮ್ಮನ್ನ ಕಂಡರೆ ಯಾಕಿಷ್ಟು ಅಸೂಯೆ?. ನಿಮ್ಮ ಭಿಕ್ಷೆಯಿಂದ ಅಥವಾ ಯಾರದ್ದೋ ಭಿಕ್ಷೆಯಿಂದ ನಾನಿಲ್ಲಿಗೆ ಬಂದಿಲ್ಲ. ಯಾವಾಗಲೂ ನಾನು ಎದ್ದು ನಿಂತು ಮಾತಾಡಿದಾಗ ಅಸಹನೆ ತೋರಿಸುತ್ತಾರೆ. ಜನರ ಕೃಪೆಯಿಂದ ನಾನು, ಮಲ್ಲಿಕಾರ್ಜುನ ಖರ್ಗೆಯವರು ಈ ಮಟ್ಟಕ್ಕೆ ಬೆಳೆದಿದ್ದೇವೆ. ಶೋಷಿತ ಸಮುದಾಯದವರು ಹಾಲು ಕುಡಿಬಾರದಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಈ ವೇಳೆ ‘ನಾನು ಏನು ತಪ್ಪು ಮಾತನಾಡಿದೆ ಹೇಳಿ’ ಎಂದು ಶರವಣ ಮರುಪ್ರಶ್ನೆ ಹಾಕಿದರು.
ಈ ವೇಳೆ ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಪ್ರಿಯಾಂಕ್ ಖರ್ಗೆ ಅರ್ಹತೆಯಿಂದ ಮೇಲೆ ಬಂದವರು. ಅವರು ನಮ್ಮ ಪಕ್ಷದ ಧ್ವನಿ. ಹಾಲಾದರೂ ಕುಡಿಯಲಿ, ನೀರಾದರೂ ಕುಡಿಯಲಿ. ನಾವು ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ. ‘ನಾನು ಬೆಳಗ್ಗೆಯಾದರೆ ವಿಸ್ಕಿ ಕುಡಿಯುತ್ತೇನೆ’ ಎಂದು ಹೇಳುವುದಕ್ಕೆ ಆಗುವುದಿಲ್ಲ. ಚಿನ್ನ ವ್ಯಾಪಾರ ಅಂದಾಕ್ಷಣ ಚಿನ್ನಕ್ಕೆ ಕಾಪರ್ ಹಾಕಲಾಗಿದೆಯಾ ಎಂದು ಪ್ರಶ್ನಿಸುವುದಕ್ಕೆ ಆಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷಗಳ ರಾಜಕೀಯದಲ್ಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ರಾಷ್ಟ್ರೀಯ ಮಟ್ಟದ ವರೆಗೆ ಬೆಳೆದಿದ್ದಾರೆಂಬುದು ನಮ್ಮೆಲ್ಲರಿಗೂ ಖುಷಿಯಾಗಿದೆ ಎಂದು ತಿರುಗೇಟು ನೀಡಿದರು.
ಈ ವೇಳೆ ಪುನಃ ತನ್ನ ಮಾತು ಸಮರ್ಥಿಸಿಕೊಂಡ ಶರವಣ, ‘ನಾನು ಪ್ರಿಯಾಂಕ್ ಖರ್ಗೆ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹೇಳಿದ್ದೇನೆ ಹೊರತು, ಯಾವುದೇ ಉದ್ದೇಶವಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಮಾಡಿಕೊಂಡಿದ್ದಾರೆ. ಅವರು ಅಪಾರ್ಥ ಮಾಡಿಕೊಂಡಿದ್ದರೆ ನಾನು ಏನು ಮಾಡಲು ಆಗುತ್ತದೆ. ನನ್ನ ಬಗ್ಗೆ, ನನ್ನ ವೃತ್ತಿ ಬಗ್ಗೆಯೂ ಕೆಲವರು ಪದೇ ಪದೆ ಮಾತನಾಡುತ್ತಾರೆ. ಹಾಗೆಂದು ಅವರ ಮೇಲೆ ಕೋಪಿಸಿಕೊಳ್ಳಲು ಆಗುತ್ತದೆಯೇ?, ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.