ಮುಖ್ಯಮಂತ್ರಿಗೆ 1402 ಕೋಟಿ ರೂ.ಗಳ ಚೆಕ್ ಹಸ್ತಾಂತರ

ಬೆಂಗಳೂರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ 2023-24ನೇ ಸಾಲಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15 ಕೋಟಿ ರೂ.ಗಳ ಧನಾದೇಶ, 191.43 ಕೋಟಿ ರೂ.ಗಳ ಲಾಭಾಂಶದ ಧನಾದೇಶ ಹಾಗೂ 1195.63 ಕೋಟಿ ರೂ.ಗಳ ವಿಶೇಷ ಲಾಭಾಂಶವನ್ನು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್(ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರಕಾರದ ಸಂಪೂರ್ಣ ಮಾಲಕತ್ವದ ಸಾರ್ವಜನಿಕ ಉದ್ದಿಮೆಯಾಗಿದ್ದು, ಸಂಸ್ಥೆಯು 2023-24ನೇ ಸಾಲಿನಲ್ಲಿ 1403.58 ಕೋಟಿ ರೂ.ಗಳ ವಹಿವಾಟು ನಡೆಸಿ 867.33 ಕೋಟಿ ರೂ. ತೆರಿಗೆ ಪೂರ್ವ ಲಾಭ ಹಾಗೂ 643.20 ಕೋಟಿ ರೂ.ತೆರಿಗೆ ನಂತರದ ಲಾಭ ಗಳಿಸಿದೆ.
ಮಾ.5ರಂದು ನಡೆದ 354ನೇ ಮಂಡಳಿ ಸಭೆಯಲ್ಲಿ ಕಂಪನಿಯು 2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (ನೆಟ್ ಪ್ರಾಫಿಟ್)ಮೇಲೆ ಷೇರುದಾರರಿಗೆ ಅಂದರೆ ಸರಕಾರಕ್ಕೆ 191.43 ಕೋಟಿ ರೂ.ಗಳನ್ನು ಶೇ.30ರಷ್ಟು ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ಅಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿತು.
ಆರ್ಥಿಕ ಇಲಾಖೆಯು 2024ರ ಜು.15ರಂದು ಮಾಡಿರುವ ಆದೇಶದನ್ವಯ ಶೇ.30ರಷ್ಟು ವಿಶೇಷ ಲಾಭಾಂಶ 1195.63 ಕೋಟಿ ರೂ.ಗಳನ್ನು 2024ರ ಮಾ.31ರ ಬ್ಯಾಲೆನ್ಸ್ ಶೀಟ್ ಪ್ರಕಾರ ನಗದು ಮತ್ತು ನಗದು ಸಮಾನದ ಮೊತ್ತದ ಮೇಲೆ ವಿಶೇಷ ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ. ಪ್ರತಿ ವರ್ಷ ಈ ನಿಗಮದಿಂದ 15 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗುತ್ತಿದೆ.
ಚೆಕ್ ಹಸ್ತಾಂತರದ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಜಿ.ಎಸ್.ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಕಾರ್ಯದರ್ಶಿ ರಮಣ್ ದೀಪ್ ಚೌಧರಿ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ ಹಾಗೂ ನಿಗಮದ ಅಧಿಕಾರಿಗಳು ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.