ಬಿಜೆಪಿ ಕಚೇರಿ ಆವರಣದಲ್ಲೇ ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಜಾಗ ಕೊಡಿ : ರಮೇಶ್ ಬಾಬು

Update: 2024-03-30 15:29 GMT

ಬೆಂಗಳೂರು: ಕೇಂದ್ರಿಯ ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಬಾಡಿಗೆ ಕಟ್ಟುವ ಬದಲು ಬಿಜೆಪಿ ಕಚೇರಿಯಲ್ಲೇ ಅವರಿಗೆ ಜಾಗ ಕೊಡಿ. ಕಳಂಕಿತರನ್ನು ರಕ್ಷಿಸಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ತಿಳಿಸಿದ್ದಾರೆ.

ಶನವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡು ಶುದ್ಧೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಕಳಂಕಿತರ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಮಾಡಲು ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಬಿಜೆಪಿ ಕಚೇರಿಯಲ್ಲೇ ಜಾಗ ಕೊಟ್ಟರೆ ನಿಮಗೂ ಅನುಕೂಲವಾಗುತ್ತದೆ ಎಂದರು.

ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಬಿಜೆಪಿಯವರಿಗೆ ನೈತಿಕತೆ ಇದೆಯೇ?, 2005ರಿಂದ ಇಲ್ಲಿಯ ತನಕ 5 ಸಾವಿರ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಚಾರ್ಜ್ ಶೀಟ್ ಹಾಕಿರುವುದು 1,116 ಪ್ರಕರಣಗಳ ಮೇಲೆ ಮಾತ್ರ. ತನಿಖೆ ಮುಗಿಸಿರುವ ಪ್ರಕರಣಗಳು ಕೇವಲ 26. ಯಾವ ಕಾರಣಕ್ಕೆ ಈ ತಾರತಮ್ಯ ಮಾಡುತ್ತಿದ್ದೀರಿ ಮೋದಿ ಅವರೇ? ನೀವು ಮತ್ತು ನಿಮ್ಮ ಸರಕಾರ ಯಾರನ್ನು ಕಾಪಾಡುತ್ತಿದೆ ಹೇಳುವಿರಾ ಎಂದು ಅವರು ಪ್ರಶ್ನಿಸಿದರು.

ಸ್ವಯಂ ಘೋಷಿತ ವಿಶ್ವನಾಯಕ ನರೇಂದ್ರ ಮೋದಿ ಅವರು ‘ನಾ ಖಾವೂಂಗಾ, ನಾ ಖಾನೇದೂಂಗಾ’ ಎಂದು ಹೇಳುತ್ತಾ ಬಂದಿದ್ದರು. ಈಗ ಅದಕ್ಕೆ ಹೊಸ ವ್ಯಾಖ್ಯಾನ ನೀಡುವ ಕಾಲ ಬಂದಿದೆ. ‘ಮೋದಿ ಅವರು ತಿನ್ನಕ್ಕೆ ಬಿಡಲ್ಲ, ನುಂಗುವವರನ್ನು ಮುಟ್ಟೊದಿಲ್ಲ’ ಎಂದು ರಮೇಶ್ ಬಾಬು ಹೇಳಿದರು.

2014ರಿಂದ ಇಲ್ಲಿಯತನಕ ಈ.ಡಿ, ಐ.ಟಿ, ಸಿಬಿಐ ಸೇರಿದಂತೆ ಈ ರೀತಿಯ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಶೇ.99ರಷ್ಟು ಪ್ರಕರಣಗಳನ್ನು ವಿರೋಧ ಪಕ್ಷ ಮತ್ತು ಅದರ ನಾಯಕರ ಮೇಲೆ ಹೂಡಲಾಗಿದೆ. ಬಿಜೆಪಿಯವರ ಮೇಲೂ ಒಂದಷ್ಟು ಪ್ರಕರಣಗಳಿವೆ ಆದರೆ ಈ ಪ್ರಕರಣಗಳು ಮುಂದಕ್ಕೂ ಹೋಗುತ್ತಿಲ್ಲ, ಹಿಂದಕ್ಕೂ ಹೋಗುತ್ತಿಲ್ಲ. ನಿಂತಲ್ಲೇ ನಿಂತಿವೆ ಎಂದು ರಮೇಶ್ ಬಾಬು ಆರೋಪಿಸಿದರು.

ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸುಮಾರು 48 ಕೋಟಿ ರೂಪಾಯಿಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣ ಎದುರಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರಕಾರ ಶ್ರೀರಕ್ಷೆ ನೀಡುತ್ತಿದೆ ಎಂದು ರಮೇಶ್ ಬಾಬು ದೂರಿದರು.

ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುಜರಾತ್ ಚುನಾವಣೆ ವೇಳೆ ಪಕ್ಷ ಉಳಿಸುವ ಕೆಲಸ ಮಾಡಿದ್ದಕ್ಕೆ 7 ಕೋಟಿ ರೂ. ಮೊತ್ತದ ಯಾವುದೋ ಪ್ರಕರಣವನ್ನು ಅವರ ಮೇಲೆ ಹಾಕಲಾಯಿತು. ಬಂಧನ ಸೇರಿದಂತೆ ಮಾನಸಿಕ ಕಿರುಕುಳ ನೀಡಲಾಗಿತ್ತು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಸುಳ್ಳು ಪ್ರಕರಣ ಹೂಡಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಕೇಜ್ರಿವಾಲ್ ಅವರು ಹಣ ವರ್ಗಾವಣೆಯಲ್ಲಿ ಎಲ್ಲೂ ಭಾಗಿಯಾಗಿಲ್ಲ. ಆದರೂ ಸಾಂಧರ್ಬಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಬಂಧಿಸಿರುವುದು ಖಂಡನೀಯ ಎಂದು ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಅರವಿಂದ ಕೇಜ್ರಿವಾಲ್ ಅವರ ಸರಕಾರ ತೆಗೆಯಿರಿ ಎಂದು ದೂರು ನೀಡಲಾಗುತ್ತದೆ. ಅದೇ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶೋಭಾ ಕರಂದ್ಲಾಜೆ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಶೋಭಾ ಅವರ ಮೇಲೆ ನಾವು ಆರೋಪ ಮಾಡುತ್ತಿಲ್ಲ. ಬದಲಾಗಿ ಕೇಂದ್ರ ಸರಕಾರದ ಸಂಸ್ಥೆಯೇ ಅವರ ಮೇಲೆ ಪ್ರಕರಣ ದಾಖಲಿಸಿದೆ ಎಂದು ರಮೇಶ್ ಬಾಬು ತಿಳಿಸಿದರು.

ಈ ದೇಶದಲ್ಲಿ ಸುಪ್ರೀಂ ಕೋರ್ಟ್ ಇರಲಿಲ್ಲ ಎಂದಿದ್ದರೇ, ಈ ದೇಶದ ಅತಿದೊಡ್ಡ ಚುನಾವಣ ಬಾಂಡ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಮಾನ್ಯ ಪ್ರಧಾನಿ ಅವರೇ ಇದಕ್ಕೆ ಉತ್ತರ ಕೊಡುವಷ್ಟು ವ್ಯವದಾನ ನಿಮ್ಮಲ್ಲಿ ಇದೆಯೇ?, ಯಾವ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಯಾವ ಆಧಾರದ ಮೇಲೆ ಅಭ್ಯರ್ಥಿಗಳನ್ನಾಗಿ ಮಾಡಿದ್ದೀರಿ ಎಂದು ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ ಎಂದು ರಮೇಶ್ ಬಾಬು ಹೇಳಿದರು.

ಶೋಭಾ ಕರಂದ್ಲಾಜೆ ಅವರ ಮೇಲೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದು ಬಿಜೆಪಿಗೆ ಅಂಟಿರುವ ಕಳಂಕ. ಈ ವಿಚಾರವಾಗಿ ಪ್ರಧಾನಿಗಳು ಸಾರ್ವಜನಿಕವಾಗಿ ಉತ್ತರವನ್ನು ಕೊಡಬೇಕು. ಇಲ್ಲದಿದ್ದರೇ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News