ಲೋಕಸಭಾ ಚುನಾವಣೆ | ಮಿತ್ರ ಪಕ್ಷಗಳನ್ನು ಸೇರಿಸಿ ‘ಸಮನ್ವಯ ಸಮಿತಿ ರಚನೆ’: ಡಿ.ಕೆ.ಶಿವಕುಮಾರ್

Update: 2024-04-02 16:13 GMT

Photo :X/@DKShivakumar

ಬೆಂಗಳೂರು : ನಮ್ಮ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಇತರೇ ಸಮೀಕ್ಷೆಗಳ ಪ್ರಕಾರ 28 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ. ನಮ್ಮ ಇಂಡಿಯಾ ಮೈತ್ರಿಕೂಟದ ಎಲ್ಲ ಮಿತ್ರ ಪಕ್ಷಗಳನ್ನು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳ ಮುಖಂಡರ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಮುಗಿಯುವ ತನಕ ಮೂರು ದಿನಗಳು ಅಥವಾ ವಾರಕ್ಕೊಮ್ಮೆ ಸಮನ್ವಯ ಸಮಿತಿ ಸಭೆ ಸೇರಲಾಗುವುದು ಎಂದರು.

ಎಲ್ಲ ಮಿತ್ರ ಪಕ್ಷಗಳು ಪ್ರತಿ ಕ್ಷೇತ್ರದಲ್ಲೂ ನಮಗೆ ಬೆಂಬಲ ನೀಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟಿವೆ. ಈ ಸಹಕಾರಕ್ಕೆ ಮುಖ್ಯಮಂತ್ರಿ ಹಾಗೂ ಎಲ್ಲರ ಪರವಾಗಿ ನಾನು ಅಭಿನಂದನೆ ತಿಳಿಸುತ್ತೇನೆ. ‘ಕೋಮುವಾದಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವ’ ಇದು ನಮ್ಮ ಪ್ರಮುಖ ಘೋಷಣೆ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ನಾವು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ಬಂದಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಸುಮಾರು 10 ಪಕ್ಷಗಳು ಒಟ್ಟಿಗೆ ಸೇರಿ ಚುನಾವಣೆಯನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮಿತ್ರ ಪಕ್ಷಗಳ ಬಲಾಬಲ ಎಷ್ಟಿದೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಅವರ ತತ್ವ, ಸಿದ್ಧಾಂತ, ಅವರನ್ನು ಅನುಸರಿಸುವ ಜನರು ನಮಗೆ ಮುಖ್ಯ ಎಂದು ಅವರು ತಿಳಿಸಿದರು.

2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ತುಮಕೂರಿನಲ್ಲಿ ಸಿಪಿಐ ಪಕ್ಷವು 17 ಸಾವಿರ ಮತಗಳಿಸಿತ್ತು. ದೇವೇಗೌಡರು 12 ಸಾವಿರ ಮತಗಳಿಂದ ಸೋಲು ಕಂಡಿದ್ದರು. ಈ ರೀತಿಯ ವಿಂಗಡಣೆ ಆಗಬಾರದು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ. ನಾವೆಲ್ಲಾ ಒಟ್ಟಾಗಿ ಎನ್‍ಡಿಎ ಸೋಲಿಸಬೇಕು ಎಂಬುದು ನಮ್ಮ ಏಕೈಕ ಉದ್ದೇಶ. ಈ ವಿಚಾರವಾಗಿ ನಾವು ಒಟ್ಟಾಗಿ ಚರ್ಚೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ವಿಪಕ್ಷಗಳ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದನ್ನು ನಾವೆಲ್ಲ ಬಲವಾಗಿ ಖಂಡಿಸುತ್ತೇವೆ. ಬೂತ್ ಮಟ್ಟದಿಂದ ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ. ಅಧಿಕಾರ ಇಲ್ಲದೇ ಇರಬಹುದು ಆದರೆ ಮಿತ್ರ ಪಕ್ಷಗಳ ಸಿದ್ಧಾಂತ, ಬದ್ಧತೆ ಮುಖ್ಯವಾದುದು. ನಾವೆಲ್ಲ ಈ ಹಿಂದೆ ಅನೇಕ ಚುನಾವಣೆಗಳನ್ನು ಬೇರೆ, ಬೇರೆಯಾಗಿ ಎದುರಿಸಿದ್ದೇವೆ. ಆದರೆ ಇಂದು ದೇಶದ ಉಳಿವಿಗೆ ಒಂದಾಗಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಚುನಾವಣಾ ಬಾಂಡ್ ವಿಚಾರದಲ್ಲಿ ಬಿಜೆಪಿ ಲೆಕ್ಕವೆ ಕೊಡುತ್ತಿಲ್ಲ. ಐಟಿ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಿದೆ. ಕಮ್ಯುನಿಸ್ಟ್ ಪಕ್ಷಕ್ಕೆ 11 ಕೋಟಿ ರೂ. ವಿಚಾರವಾಗಿ ನೋಟಿಸ್ ನೀಡಿದ್ದಾರೆ. ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಮೋದಿ ಇದಕ್ಕೆ ಉತ್ತರ ಕೊಡಬೇಕು. ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಬರ ಪರಿಹಾರದ ವಿಚಾರವಾಗಿ ಏನನ್ನೂ ಮಾತನಾಡುತ್ತಿಲ್ಲ ಎಂದು ಅವರು ಟೀಕಿಸಿದರು.

ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಲಾಭವಾಗುತ್ತದೆಯೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 28 ಕ್ಷೇತ್ರದಲ್ಲೂ ಅನುಕೂಲವಾಗಲಿದೆ. ರಾಜಕಾರಣದಲ್ಲಿ 49 ಎಂದರೆ ಸೊನ್ನೆ, 51 ಎಂದರೆ ನೂರು ಎಂದರ್ಥ. ಧ್ರುವನಾರಾಯಣ್ 1 ಮತದಿಂದ ಗೆದ್ದಿದ್ದರು. ದಿನೇಶ್ ಗುಂಡೂರಾವ್ ಅಲ್ಪ ಅಂತರದಲ್ಲೇ ಗೆದ್ದರು, ಸೌಮ್ಯರೆಡ್ಡಿ 16 ಮತಗಳಿಂದ ಸೋತರು. ಆದ ಕಾರಣ ಒಂದೊಂದು ಮತವೂ ಮುಖ್ಯ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮಾತನಾಡಿ, 10 ವರ್ಷದ ಬಿಜೆಪಿ ಆಡಳಿತದ ವೈಖರಿ ನೋಡಿದ ಮೇಲೆ ಯಾರಿಗೆ ಭಯ ಇಲ್ಲ ಅನ್ನೋದನ್ನು ಹುಡುಕುವಂತಾಗಿದೆ. ಪ್ರಜಾಪ್ರಭುತ್ವ ಇದೆಯೇ? ಸಂವಿಧಾನದ ಅಡಿಯಲ್ಲಿ ದೇಶದ ಆಡಳಿತ ನಡೆಯುತ್ತಿದೆಯೇ ಅನ್ನೋದನ್ನು ಆಲೋಚನೆ ಮಾಡಬೇಕಿದೆ ಎಂದರು.

ಈ ಅಧಿಕಾರದಲ್ಲಿ ಬಂಧನವಾಗಿರುವುದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಲ್ಲ ಪ್ರಜಾಪ್ರಭುತ್ವ, ಜಪ್ತಿ ಆಗಿರುವುದು ವಿಪಕ್ಷಗಳ ಬ್ಯಾಂಕ್ ಖಾತೆಗಳಲ್ಲ ಸಂವಿಧಾನ. ಸರ್ವಾಧಿಕಾರ ತೊಲಗಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಒಂದೇ ಘೋಷಣೆಯಡಿ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಇಲ್ಲಿ ಕೋಮುವಾದಿ ಸರ್ವಾಧಿಕಾರ ಅಷ್ಟೇ ಅಲ್ಲ, ಆಧ್ಯಾತ್ಮಿಕ ಸರ್ವಾಧಿಕಾರವು ನಡೆಯುತ್ತಿದೆ. ರಾಮಮಂದಿರ ಇನ್ನೂ ಪೂರ್ಣ ಆಗಲೇ ಇಲ್ಲ. ಮತಗಳಿಕೆಗಾಗಿ ಅದನ್ನು ಲೋಕಾರ್ಪಣೆ ಮಾಡಿದರು. ಬ್ರಹ್ಮಾಂಡ ಭ್ರಷ್ಟಾಚಾರ ಆಗಿರುವುದು ಚುನಾವಣಾ ಬಾಂಡ್‍ಗಳು. ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಪಕ್ಷಕ್ಕೆ ದೇಣಿಗೆ ಹೆಸರಿನಲ್ಲಿ ದರೋಡೆ ಮಾಡಿದ್ದಾರೆ ಎಂದು ಚಂದ್ರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ಎನ್‍ಸಿಪಿ ರಾಜ್ಯಾಧ್ಯಕ್ಷ ಸಿ.ಎಸ್.ಇನಾಂದಾರ್, ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ಡಿ.ರೊಜಾರಿಯೋ, ರಾಷ್ಟ್ರೀಯ ಜನತಾದಳ ರಾಜ್ಯಾಧ್ಯಕ್ಷ ಯಾಕುಬ್ ಗುಲ್ವಾಡಿ, ಫಾರ್ವರ್ಡ್ ಬ್ಲಾಕ್ ರಾಜ್ಯಾಧ್ಯಕ್ಷ ಶಿವಶಂಕರ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News