ಹೊಸವರ್ಷ: ಬೆಂಗಳೂರು ಎಂಜಿ ರಸ್ತೆ ಸೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ 8 ಮೆಟ್ರಿಕ್ ಟನ್ ತ್ಯಾಜ್ಯ

Update: 2024-01-01 13:13 GMT

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಯಲ್ಲಿ ಎಂ.ಜಿ. ರಸ್ತೆ ಸೇರಿದಂತೆ ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಬಿದ್ದಿದ್ದ ಸುಮಾರು 8 ಮೆಟ್ರಿಕ್ ಟನ್ ತ್ಯಾಜ್ಯ-ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್‍ಮಂಡ್ ರಸ್ತೆ, ಸೇಂಟ್ ಮಾಕ್ರ್ಸ್ ರಸ್ತೆ, ಕಸ್ತೂರ್ ಬಾ ರಸ್ತೆ ಸಹಿತ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಮುಂಜಾನೆ 3.30ರಿಂದ ಸ್ವಚ್ಛತಾ ಕಾರ್ಯ ಆರಂಭಿಸಿ ಬೆಳಗ್ಗೆ 6.30ರ ವೇಳೆಗೆ ಪೂರ್ಣಗೊಳಿಸಲಾಯಿತು. ಈ ರಸ್ತೆಗಳಲ್ಲಿ ಸುಮಾರು 8 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸ್ವಚ್ಛತಾ ಕಾರ್ಯವು ಶಾಂತಿನಗರ ವಿಭಾಗದ ಘನತ್ಯಾಜ್ಯ ವಿಭಾಗದಿಂದ ಮಾಡಲಾಗಿದ್ದು, 3 ಮೇಲ್ವಿಚಾರಕರು, 80ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡಿದರು. ಸ್ಥಳದಲ್ಲಿ 1 ಕಾಂಪ್ಯಾಕ್ಟರ್ ಹಾಗೂ 7 ಆಟೋ ಟಿಪ್ಪರ್ ಗಳಿದ್ದವು.

ಸಿಬಿಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು, ಮಧ್ಯದ ಬಾಟಲಿಗಳು ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಸಲಾಗಿದೆ. ಪುನರ್ ಬಳಕೆಯ ಸುಮಾರು 2 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ.

ಸ್ವಚ್ಚತಾ ಕಾರ್ಯದಲ್ಲಿ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಪ್ಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News