ಬೆಳಗಾವಿ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಚರಿಸುತ್ತಿದ್ದ ಕಾರು ಅಪಘಾತ
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಇಂದು ಮುಂಜಾನೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ನಡೆದಿರುವುದು ವರದಿಯಾಗಿದೆ.
ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪರಿಣಾಮ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚನ್ನರಾಜ ಹಟ್ಟಿಹೊಳಿಯವರ ತಲೆಗೆ ಗಾಯವಾಗಿದೆ ಎನ್ನಲಾಗಿದ್ದು, ಇಬ್ಬರನ್ನೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಶಾಸಕಾಂಗ ಪಕ್ಷದ ಸಭೆ ಮುಗಿಸಿ ಸೋಮವಾರ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಕಾರಿನಲ್ಲಿ ಬರುತ್ತಿದ್ದರು. ಇಂದು ಮುಂಜಾವ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮಕ್ಕೆ ತಲುಪಿದಾಗ ರಸ್ತೆಯಲ್ಲಿ ಹಠಾತ್ ನಾಯಿ ಅಡ್ಡ ಬಂದಿದೆ ಎನ್ನಲಾಗಿದೆ. ನಾಯಿ ಅಡಿಗೆ ಬೀಳುವುದನ್ನು ತಪ್ಪಿಸುವ ಯತ್ನದಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ.
ಮರಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.