ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ : ಸಿ.ಟಿ.ರವಿ ವಿರುದ್ಧ ವ್ಯಾಪಕ ಆಕ್ರೋಶ, ಸಭಾಪತಿಗೆ ದೂರು

Update: 2024-12-19 10:56 GMT

ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.

ಅಂಬೇಡ್ಕರ್‌ ಕುರಿತ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ, ಈ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಎಲ್ಲ ಸದಸ್ಯರು ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ಪಟ್ಟು ಹಿಡಿದರು. ಈ ವೇಳೆ ಆಡಳಿತ ಮತ್ತು ವಿಕಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ. ಇದರಿಂದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮುಂದೂಡಿದರು.

ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಈ ಗದ್ದಲದ ಮಧ್ಯೆ ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸಭಾಪತಿಗೆ ದೂರು ನೀಡಿದರು. ದೂರು ಸ್ವೀಕರಿಸಿದ ಸಭಾಪತಿ, ಆಡಿಯೊ ವಿಡಿಯೋ ಪರಿಶೀಲನೆಗೆ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News