ಬೆಳಗಾವಿ ಅಧಿವೇಶನ | ನಕಲಿ ವೈದ್ಯರ ಕ್ಲಿನಿಕ್‍ಗಳ ವಿರುದ್ಧ ಕಠಿಣ ಕ್ರಮ : ಸಚಿವ ದಿನೇಶ್ ಗುಂಡೂರಾವ್

Update: 2024-12-16 12:22 GMT

ದಿನೇಶ್ ಗುಂಡೂರಾವ್

ಬೆಳಗಾವಿ : ರಾಜ್ಯದಲ್ಲಿ ನಕಲಿ ವೈದ್ಯರ ಕ್ಲಿನಿಕ್‍ಗಳ ವಿರುದ್ಧ ಕೆ.ಪಿ.ಎಂ.ಇ. ತಿದ್ದುಪಡಿ ಅಧಿನಿಯಮದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕ್ಲಿನಿಕ್‍ಗಳನ್ನು ಪ್ರಾರಂಭಿಸಲು ಕೆ.ಪಿ.ಎಂ.ಇ. ತಿದ್ದುಪಡಿ ಅಧಿನಿಯಮ 2017 ಸೆಕ್ಷನ್ 5ರಂತೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿ, ನಿಯಾಮಾನುಸಾರ ಕೆ.ಪಿ.ಎಂ.ಇ. ನೋಂದಣಿ ಪ್ರಮಾಣಪತ್ರವನ್ನು ಪಡೆದು, ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಪ್ರಾರಂಭಿಸಬಹುದಾಗಿದೆ ಎಂದರು.

ಈ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು, ಕೆ.ಪಿ.ಎಂ.ಇ. ಅಧಿನಿಯಮ 2007, ಸೆಕ್ಷನ್ 4ರನ್ವಯ ನೊಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರವಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು(ಸಮಿತಿಯ ಸದಸ್ಯ ಕಾರ್ಯದರ್ಶಿಗಳು) ಇರುತ್ತಾರೆ ಹಾಗೂ ಸಮಿತಿಯ ಇತರೆ ಸದಸ್ಯರಾಗಿ ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದಿಂದ ಓರ್ವ ಸದಸ್ಯರು ಮತ್ತು ಓರ್ವ ಮಹಿಳಾ ಪ್ರತಿನಿಧಿ ಇರುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೋಲಾರದಲ್ಲಿ 134 ನಕಲಿ ವೈದ್ಯರ ಕ್ಲಿನಿಕ್ ಪತ್ತೆ: ಜನವರಿ 2021ರಿಂದ ಇಲ್ಲಿಯವರೆಗೆ ಕೋಲಾರ ಜಿಲ್ಲೆಯಲ್ಲಿ 134 ನಕಲಿ ವೈದ್ಯರ ಕ್ಲಿನಿಕ್‍ಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 16 ಕ್ಲಿನಿಕ್‍ಗಳನ್ನು ಸೀಜ್ ಮಾಡಲಾಗಿದೆ, 8 ಪಿ.ಸಿ.ಆರ್ ಪ್ರಕರಣಗಳು ದಾಖಲಾಗಿವೆ, 1 ಪ್ರಕರಣವು ಎಫ್‍ಐಆರ್ ಆಗಿದೆ, 7 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಮತ್ತು ಈವರೆಗೆ 102 ಕ್ಲಿನಿಕ್‍ಗಳನ್ನು ಮುಚ್ಚಿಸಿ ಕ್ರಮಕೈಗೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News