ಅಭಿವೃದ್ಧಿಯಲ್ಲಿ ಝಿರೋ, ಭ್ರಷ್ಟಾಚಾರದಲ್ಲಿ 100 ಪರ್ಸೆಂಟ್ ಸರಕಾರ : ಸುನೀಲ್ ಕುಮಾರ್

Update: 2024-12-16 16:45 GMT

ವಿ.ಸುನೀಲ್ ಕುಮಾರ್ 

ಬೆಳಗಾವಿ(ಸುವರ್ಣ ವಿಧಾನಸೌಧ) : ಹತ್ತೊಂಬತ್ತು 19 ತಿಂಗಳಲ್ಲಿ ನಮ್ಮ ಕ್ಷೇತ್ರಗಳಲ್ಲಿ ಒಂದೇ ಒಂದು ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ಈ ಸರಕಾರಕ್ಕೆ ಆಗಿಲ್ಲ. ಶಾಸಕರು ಕ್ಷೇತ್ರಗಳಲ್ಲಿ ಗೌರವದಿಂದ ಓಡಾಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇದೊಂದು ಅಭಿವೃದ್ಧಿಯಲ್ಲಿ ಝಿರೋ(ಶೂನ್ಯ) ಹಾಗೂ ಭ್ರಷ್ಟಾಚಾರದಲ್ಲಿ 100 ಪರ್ಸೆಂಟ್ ಸರಕಾರ ಎಂದು ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ‘ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಸರಕಾರದಿಂದ ಅನುದಾನಗಳು ಬಿಡುಗಡೆಯಾಗದೆ ಇರುವುದರಿಂದ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಜನರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

ಅನುದಾನ ಕೇಳಿದ ಕಾಂಗ್ರೆಸ್ ಶಾಸಕರಿಗೆ ನೋಟಿಸ್ ನೀಡಲಾಗುತ್ತೆ. ಜಯನಗರದ ಬಿಜೆಪಿ ಶಾಸಕ ಅನುದಾನ ಕೇಳಿದರೆ ತಗ್ಗಿ ಬಗ್ಗಿ ಬಂದರೆ ಅನುದಾನ ನೀಡುತ್ತೇನೆ ಎಂದು ಉಪ ಮುಖ್ಯಮಂತ್ರಿ ದರ್ಪದಿಂದ ವರ್ತಿಸುತ್ತಾರೆ. ಯಾವ ಯಾವ ಇಲಾಖೆಯಿಂದ ವಿಧಾನಸಭಾ ಕ್ಷೇತ್ರಗಳಿಗೆ ಎಷ್ಟು ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಕುರಿತು ಸರಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

3,71,383 ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡಿರುವ ಸರಕಾರವು ಶಾಸಕರ ಕ್ಷೇತ್ರಗಳಿಗೆ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ಈ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರೇ ಅವರಿಗೆ ಕೋಪ ಬರುತ್ತದೆ. 3,71,383 ಕೋಟಿ ರೂ.ಗಳ ಬಜೆಟ್‍ನಲ್ಲಿ 52,009 ಕೋಟಿ ರೂ.ಗಳನ್ನು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ, ವೇತನ ನೀಡಲು 80,436 ಕೋಟಿ ರೂ., ಪಿಂಚಣಿಗಳಿಗಾಗಿ 32,355 ಕೋಟಿ ರೂ., ಬಡ್ಡಿಪಾವತಿಗಾಗಿ 39,234 ಕೋಟಿ ರೂ., ಸಬ್ಸಿಡಿಗಳಿಗಾಗಿ 25,904 ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ 10,300 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಇನ್ನು ಉಳಿಯುವುದು 56 ಸಾವಿರ ಕೋಟಿ ರೂ.ಗಳು ಮಾತ್ರ ಎಂದು ಅವರು ವಿವರಿಸಿದರು.

ರಸ್ತೆಗಳ ಗುಂಡಿ ಮುಚ್ಚಲು ಸರಕಾರ ಹಣ ನೀಡುತ್ತಿಲ್ಲ. ಲೋಕೋಪಯೋಗಿ ರಸ್ತೆ, ರಾಜ್ಯ ಹೆದ್ದಾರಿ, ಜಿಲ್ಲಾ ಪಂಚಾಯತ್ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ಎಷ್ಟು ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ ಎಂಬುದನ್ನು ತಿಳಿಸಲಿ. ಉಡುಪಿ ಜಿಲ್ಲೆಯಲ್ಲಿ 280 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಿಗೆ ಹಲಗೆ ಹಾಕಲು ಈ ಸರಕಾರದ ಬಳಿ ದುಡ್ಡಿಲ್ಲ ಎಂದು ಸುನೀಲ್ ಕುಮಾರ್ ಟೀಕಿಸಿದರು.

ಎಸ್ಸಿಪಿ-ಟಿಎಸ್ಪಿ ಕಾಯ್ದೆ ನಾವು ಜಾರಿಗೆ ತಂದದ್ದು ಎಂದು ಪದೇ ಪದೇ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಅದೇ ರೀತಿ ಎಸ್ಸಿಪಿ-ಟಿಎಸ್ಪಿಯ 14,731 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ ಕೀರ್ತಿಯೂ ಈ ಸರಕಾರಕ್ಕೆ ಸಲ್ಲಬೇಕು. ಅನುದಾನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಪತ್ರ ಬರೆದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News