ಬೆಳಗಾವಿ ಅಧಿವೇಶನ | ಬಾಣಂತಿಯರ ಸಾವು ಪ್ರಕರಣದ ಕುರಿತು ನ್ಯಾಯಾಂಗ ತನಿಖೆ : ದಿನೇಶ್ ಗುಂಡೂರಾವ್

Update: 2024-12-19 10:25 GMT

 ದಿನೇಶ್ ಗುಂಡೂರಾವ್

ಬೆಳಗಾವಿ : ‘ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಬಾಣಂತಿಯರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಬಾಣಂತಿಯರ ಸಾವಿನ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಉತ್ತರ ನೀಡಿದ ಅವರು, ಒಂದು ವೇಳೆ ನನ್ನ ವೈಫಲ್ಯವಿದ್ದರೂ ಯಾವುದೇ ಕ್ರಮವನ್ನು ಎದುರಿಸಲು ಸಿದ್ಧ. ನವೆಂಬರ್ ತಿಂಗಳ 9, 10 ಹಾಗೂ 11 ತಾರೀಕಿನಂದು ಬಳ್ಳಾರಿ ಆಸ್ಪತ್ರೆಯಲ್ಲಿ 34 ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಆ ಪೈಕಿ ಏಳು ಮಂದಿ ಬಾಣಂತಿಯರು ಹೆರಿಗೆ ನಂತರ ತೀವ್ರ ಅಸ್ವಸ್ಥಗೊಂಡರು. ಇದರಲ್ಲಿ 5 ಮಂಧಿ ಬಾಣಂತಿಯರು ಸಾವನಪ್ಪಿದರೆ, ಇಬ್ಬರು ಸಾವಿನಿಂದ ಪಾರಾದರು. ಘಟನೆ ತಿಳಿದ ತಕ್ಷಣವೇ, ಸಾವಿನ ಕಾರಣ ತಿಳಿಯಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವೈದ್ಯರ ತಂಡ ರಚಿಸಿ ಬಳ್ಳಾರಿಗೆ ಕಳುಹಿಸಿದ್ದು, ಈ ತಂಡ ನ.12 ಹಾಗೂ 13ರಂದು ಅಧ್ಯಯನ ನಡೆಸಿ, ನ.14ರಂದು ವರದಿ ನೀಡಿದೆ.

ಇದರಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಎಲ್ಲ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆ. ವೈದ್ಯರಿಂದ ಲೋಪವಾಗಿಲ್ಲ, ಬದಲಾಗಿ ಸಿಜೇರಿಯನ್ ನಂತರ ಬಾಣಂತಿಯರಿಗೆ ನೀಡಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಪ್ರತಿಕೂಲ ಪರಿಣಾಮದಿಂದ ಸಾವು ಸಂಭವಿಸಿರುವುದಾಗಿ ವರದಿ ನೀಡಿದರು. ಇದರ ಆಧಾರದಲ್ಲಿ ಪಶ್ಚಿಮ್ ಬಂಗಾ ಕಂಪೆನಿ ಪೂರೈಸಿದ ಐವಿ ದ್ರಾವಣವನ್ನು ಪರೀಕ್ಷೆಗಾಗಿ ಲ್ಯಾಬಿಗೆ ಕಳುಹಿಸಿಕೊಟ್ಟಾಗ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾಗಿದೆ. ಹೈದರಾಬಾದ್ ಲ್ಯಾಬ್‍ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿಯಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ತಿಳಿದು ಬಂದಿದೆ ಎಂದು ವಿವರಿಸಿದರು.

ಸಾವಿನ ಲೆಕ್ಕ ಪರಿಶೋಧನೆ: ಪಶ್ಚಿಮ್ ಬಂಗಾ ಕಂಪೆನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ಇತರೆ ಆಸ್ಪತ್ರೆಗಳಿಗೂ ಪೂರೈಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭವಿಸಿದ ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆಗೂ ಸೂಚನೆ ನೀಡಿದ್ದೇನೆ. ಸಿಎಂ ಈಗಾಗಲೇ ಅಭಿವೃದ್ಧಿ ಆಯುಕ್ತರನ್ನು ಪ್ರಕರಣದ ಪರಿಶೀಲನೆ ನಡೆಸಿ ವರದಿ ನೀಡಲು ನೇಮಿಸಿದ್ದಾರೆ. ತಜ್ಞ ವೈದ್ಯರಿಂದಲೂ ತನಿಖೆ ನಡೆಯುತ್ತಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಆಡಳಿತದಲ್ಲಿ ಸುಧಾರಣೆಗೆ ವರದಿ ನೀಡಲು ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕಳಪೆ ಐವಿ ದ್ರಾವಣ ಪೂರೈಕೆ ಹೇಗೆ?: ಪಶ್ಚಿಮ್ ಬಂಗಾ ಕಂಪೆನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾದ ಮೇಲೂ ಐವಿ ದ್ರಾವಣ ಪೂರೈಕೆ ಆಗಿದೆ. ಮಾರ್ಚ್ ಹಾಗೂ ಎಪ್ರಿಲ್‍ನಲ್ಲಿಯೇ ಐವಿ ದ್ರಾವಣದ ಗುಣಮಟ್ಟದ ಕುರಿತು ಸರಕಾರಕ್ಕೆ ಮಾಹಿತಿ ದೊರಕಿತ್ತು. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದವರಿಗೆ ಚಳಿ-ನಡುಕ ಉಂಟಾಗುತಿತ್ತು. ಇದೇ ಮಾದರಿಯಲ್ಲಿ ಗುಂಡ್ಲಪೇಟೆ ಆಸ್ಪತ್ರೆಯಲ್ಲಿಯು ರೋಗಿಗಳಿಗೆ ತೊಂದರೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರಕಾರ ಎನ್‍ಎಬಿಎಲ್ ಹಾಗೂ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಿದಾಗ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ. ಇದನ್ನಾಧರಿಸಿ ಪಶ್ಚಿಮ್ ಬಂಗಾ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದರು.

ಇದನ್ನು ವಿರೋಧಿಸಿ ಪಶ್ಚಿಮ್ ಬಂಗಾ ಕಂಪೆನಿ ಕೇಂದ್ರ ಔಷಧ ಲ್ಯಾಬೋರೆಟರಿಯಿಂದ ಗುಣಮಟ್ಟದ ಪರೀಕ್ಷೆಯ ವರದಿ ಆಧರಿಸಿ ಕೋರ್ಟ್‍ನಲ್ಲಿ ಸರಕಾರ ದಾವೆ ಹೂಡಿದೆ. ಇದರೊಂದಿಗೆ ಎನ್‍ಎಬಿಲ್ ಲ್ಯಾಬ್‍ಗಳು ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಗುಣಮಟ್ಟ ಸರಿಯಿದೆ ಎಂದು ವರದಿ ನೀಡಿದವು. ಜೂನ್ ತಿಂಗಳ ವೇಳೆಗೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಇತರೆ ಶಸ್ತ್ರಚಿಕತ್ಸೆ ಮಾಡಿದವರಿಗೆ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ನೀಡಲು ಬೇಡಿಕೆ ಹೆಚ್ಚಾಯಿತು. ಈ ವೇಳೆ ಸರಕಾರ ಪಶ್ಚಿಮ್ ಬಂಗಾ ಕಂಪನಿ ಐವಿ ದ್ರಾವಣದ 192 ಬ್ಯಾಚುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ, 22 ಬ್ಯಾಚ್‍ಗಳನ್ನು ಕಳಪೆ ಎಂದು ತಡೆಹಿಡಿದು ಉಳಿದ ಬ್ಯಾಚುಗಳ ಐವಿ ದ್ರಾವಣವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಿದೆ ಎಂದರು.

ಫಾರ್ಮಾ ಕಂಪೆನಿಗಳ ಲಾಭಿ: ದೇಶದ ಫಾರ್ಮಾ ಕಂಪೆನಿಗಳು ಪ್ರಪಂಚದಲ್ಲಿಯೇ ಉತ್ತಮ ಹೆಸರು ಹೊಂದಿವೆ. ಭಾರತ ವಿಶ್ವದ ಫಾರ್ಮಾ ಹಬ್ ಎಂದೇ ಪ್ರಸಿದ್ದಿ ಪಡೆದಿದೆ. ಆದರೆ ಈ ಫಾರ್ಮಾ ಕಂಪೆನಿಗಳಿಗೆ ಕರಾಳ ಮುಖ ಇದೆ. ವಿದೇಶಗಳಿಗೆ ಸರಬರಾಜು ಮಾಡುವ ಔಷಧಗಳ ತಯಾರಿಕೆಗೆ ಈ ಫಾರ್ಮಾ ಕಂಪೆನಿಗಳು ಪ್ರತ್ಯೇಕವಾಗಿ ಘಟಗಳನ್ನು ಸ್ಥಾಪಿಸಿವೆ. ಈ ಘಟಕಗಳು ಗುಣಮಟ್ಟ ಹಾಗೂ ಎಲ್ಲ ಅಂತರಾಷ್ಟ್ರೀಯ ನಿಯಮಗಳನ್ನು ಪಾಲಿಸುತ್ತವೆ. ಆದರೆ, ಭಾರತದಲ್ಲಿ ಪೂರೈಸುವ ಔಷಧ ಘಟಕಗಳ ಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿದರು.

ಶುಲ್ಕ ಹೆಚ್ಚಿಸಿಲ್ಲ: ರಾಜ್ಯದ ಜಿಲ್ಲಾ, ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕಗಳನ್ನು ಹೆಚ್ಳಳ ಮಾಡಿಲ್ಲ. ರಾಜ್ಯದಲ್ಲಿ 12 ವರ್ಷಗಳಿಂದ ಬಳಕೆದಾರರ ಶುಲ್ಕಗಳನ್ನು ಹೆಚ್ಚಿಸಿಲ್ಲ. ಈ ಹಿನ್ನಲೆಯಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಜ್ಯದ ಎಲ್ಲ 108 ಆಂಬ್ಯುಲೆನ್ಸ್ ವಾಹನಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ದೇಶದಲ್ಲಿ ಬ್ರೈನ್ ಹೆಲ್ತ್ ಕ್ಲೀನಿಕ್‍ಗಳನ್ನು ಪ್ರಾರಂಭಿಸಿದ ಪ್ರಥಮ ರಾಜ್ಯ ಕರ್ನಾಟಕ, ಈ ಬಗ್ಗೆ ಕೇಂದ್ರ ನೀತಿ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

‘ಆರೋಗ್ಯ ಇಲಾಖೆ ಎಲ್ಲ ವರ್ಗದ ನೌಕರರ ಸೇವಾ ಜೇಷ್ಠತಾ ಪಟ್ಟಿ ಸಿದ್ದಪಡಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಶೇ.84ರಷ್ಟು ಅನುದಾನ, ರಾಜ್ಯದ ಶೇ.97ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ರಾಜ್ಯದಲ್ಲಿ ಔಷಧಗಳ ಕೊರತೆಯಿಲ್ಲ. 1,126 ವಿವಿಧ ಬಗೆಯ ಔಷಧಗಳು ಆಸ್ಪತ್ರೆಗಳಲ್ಲಿ ದೊರಕುತ್ತಿವೆ. ರಾಜ್ಯದ 17 ಜಿಲ್ಲಾಸ್ಪತ್ರೆ, 164 ತಾಲೂಕು ಆಸ್ಪತ್ರೆ, 64 ಸಮುದಾಯ ಆರೋಗ್ಯ ಕೇಂದ್ರಗಳು ಎನ್‍ಕ್ಯೂಎಸ್ ಮಾನ್ಯತೆ ಪಡೆದಿವೆ’

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News