ಆಕ್ಷೇಪಾರ್ಹ ಹೇಳಿಕೆ | ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಸಿ.ಟಿ.ರವಿಗೆ ಮುತ್ತಿಗೆ ಹಾಕಿ ಆಕ್ರೋಶ
ಬೆಳಗಾವಿ : ಪರಿಷತ್ ಸದಸ್ಯ ಸಿ.ಟಿ.ರವಿ, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ವಿಧಾನಸೌಧದ ಕಾರಿಡಾರ್‌ನಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದೆ.
ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಹೆಬ್ಬಾಳ್ಕರ್ ಬೆಂಬಲಿಗರು, ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಸುವರ್ಣ ವಿಧಾನಸೌಧದಲ್ಲಿ ಗೊಂದಲ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಮಾರ್ಷಲ್‍ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ‘ಏಯ್ ನಮ್ಮ ಅಕ್ಕನಿಗೆ ಹೀಗಂದ್ಯಾ..’ ಎಂದು ಜಗಳಕ್ಕೆ ಹೋಗಿದ್ದು ನಡೆದಿದೆ. ‘ಧೈರ್ಯವಿದ್ದರೆ ಹೊರಗೆ ಬಾ’ ಎಂದು ಏಕವಚನದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ದೊಡ್ಡ ಗಲಾಟೆ ಉಂಟಾಗಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದರು. ಅಲ್ಲದೆ, ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಗಲಾಟೆ ನಡೆಯುವ ಸ್ಥಳದಲ್ಲೇ ಹೆಬ್ಬಾಳ್ಕರ್ ಸಹೋದರ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕಾಣಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸಿಟಿ ರವಿ, ‘ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಧರಣಿ ಕುಳಿತ ಪ್ರಸಂಗವು ನಡೆಯಿತು.
ಪೊಲೀಸರ ನಿಯೋಜನೆ: ದಿಢೀರ್ ಗದ್ದಲ, ಗೊಂದಲದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ,ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಖ್ಯದ್ವಾರದ ಬಳಿ ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಬಂದೋಬಸ್ತ್ ವೀಕ್ಷಣೆ ಮಾಡಿದರು.