2ನೇ ವಿಮಾನ ನಿಲ್ದಾಣಕ್ಕೆ ಇನ್ನೊಂದು ವಾರದಲ್ಲಿ ಸ್ಥಳ ನಿಗದಿ, ಸದ್ಯದಲ್ಲೇ ಪ್ರಸ್ತಾವ ಸಲ್ಲಿಕೆ : ಎಂ.ಬಿ.ಪಾಟೀಲ್
ಬೆಳಗಾವಿ : ಬೆಂಗಳೂರಿನ ಜನರು ಮತ್ತು ಉದ್ಯಮಿಗಳ ಒಳಿತಿಗಾಗಿ 2ನೇ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕಾಗಿ ಮೂರ್ನಾಲ್ಕು ಸ್ಥಳಗಳು ಸರಕಾರದ ಮುಂದಿವೆ. ಈ ಬಗ್ಗೆ ಐಡೆಕ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಇನ್ನೊಂದು ವಾರದಲ್ಲಿ ಇದರ ಚಿತ್ರಣ ಸಿಗಲಿದ್ದು, ಅನಂತರದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಐಡೆಕ್ ಸಂಸ್ಥೆ ಸಂಸ್ಥೆಯು ವಿಮಾನ ನಿಲ್ದಾಣ ಸ್ಥಳವನ್ನು ಆಖೈರು ಮಾಡುತ್ತದೆ. ಇದರಲ್ಲಿ ನನಗೆ ಯಾವ ಅಧಿಕಾರವಿಲ್ಲ. ಸ್ಥಳ ಆಖೈರಾದ ಮೇಲಷ್ಟೇ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಯಾವ ಜಾಗ ಅಂತಿಮವಾಗುತ್ತದೋ ಅಲ್ಲಿರುವ ಮಾರ್ಗಸೂಚಿ ದರದ ಪ್ರಕಾರ, ಜಮೀನು ಕಳೆದುಕೊಳ್ಳಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಸಾಗಾಣಿಕೆ, ಸ್ಥಳದ ಭೌಗೋಳಿಕ ಲಕ್ಷಣ ಇತ್ಯಾದಿಗಳನ್ನು ಪರಿಗಣಿಸಿ, ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳವನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.