ಶಾಸಕ ಮುನಿರತ್ನ ಬಂಧನದ ಹಿಂದೆ ದ್ವೇಷ ರಾಜಕಾರಣವಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-09-15 10:26 GMT

ಬೆಳಗಾವಿ: ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಅವರ ಬಂಧನದ ಹಿಂದೆ ಯಾವುದೇ ದ್ವೇಷ ರಾಜಕಾರಣವಿಲ್ಲ. ಅವರಿಗೀಗ ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಮನಿರತ್ನ ಅವರ ವಿಚಾರದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಾರೆ? .ಅವರು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರೇನು ಮುನಿರತ್ನ ಅವರಿಗೆ ಕೆಟ್ಟ ಮಾತುಗಳಿಂದ ಬೈಯಿರಿ, ಅಥವಾ ಬ್ಲಾಕ್ ಮೇಲ್ ಮಾಡಿ ಎಂದು ಹೇಳಿದ್ದಾರಾ? ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ ಅವರ ಸ್ಥಿತಿ ಎಂದು ಕಿಡಿಕಾರಿದರು.

ಮುನಿರತ್ನ ಅವರು ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದೆಂದು ಸಚಿವರು ಇದೇ ವೇಳೆ ಕಿವಿಮಾತು ಹೇಳಿದರು.

ಮಾನವ ಸರಪಳಿಯಲ್ಲಿ 1.50 ಲಕ್ಷ ಇಲಾಖಾ ನೌಕರರು ಭಾಗಿ :

ರಾಜ್ಯ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೆ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮಾನವೀಯ ಮೌಲ್ಯಗಳ ಸಾಕಾರಗೊಳಿಸುವ ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ನೌಕರವರ್ಗ ಭಾಗವಹಿಸಿದ್ದು ಹೆಮ್ಮೆ ಎನಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News