ಸಿ.ಟಿ.ರವಿಯದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮನಸ್ಸಿನಲ್ಲೇ ಕೊಳೆ ಇಟ್ಟುಕೊಂಡಿದ್ದಾರೆ. ಅದನ್ನು ಎಷ್ಟು ಬಾರಿ ತೊಳೆದರೂ ಹೋಗೋದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಟೀಕಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರೇ ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆಯಿರಿ. ಮೈಗೆ ಹಚ್ಚಿರೊ ಕೊಳಕನ್ನು ತೊಳೆಯಬಹುದು. ಮನಸ್ಸಿಗೆ ಹಚ್ಚಿರೋ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ ಎಂದು ನನಗೂ ಹಿರಿಯರೊಬ್ಬರು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಸಿ.ಟಿ.ರವಿ ಅವರ ಮನಸ್ಸಿನಲ್ಲೇ ಕೊಳಕಿದೆ. ಅಂತಹ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ. ನಾನು ಎರಡು ದಿನಗಳ ಕಾಲ ಸರಿಯಾಗಿ ನಿದ್ದೆ ಮಾಡಲಿಲ್ಲ. ಅಂದು ಪರಿಷತ್ ಕಲಾಪದಲ್ಲಿ ಘಟನೆ ಆದ ಬಳಿಕ ನಾನು ಅಲ್ಲೆ ಕುಳಿತಿದ್ದೆ. ಅವರು ಊಸರವಳ್ಳಿ ಥರ ಓಡಿ ಹೋದರು. ತಕ್ಷಣವೇ ನಾನು ಹರಿಪ್ರಸಾದ್, ಭೋಸರಾಜುರಿಗೆ ಸಿ.ಟಿ.ರವಿ ಬಳಸಿದ ಭಾಷೆ ಬಗ್ಗೆ ವಿವರಿಸಿದೆ. ಡಾಯತೀಂದ್ರ, ಉಮಾಶ್ರೀ, ನಾಗರಾಜ್ ಯಾದವ್, ಬಿಲ್ಕಿಸ್ ಭಾನು, ಎಲ್ಲರೂ ನನ್ನ ಹತ್ತಿರ ಬಂದು, ಸಿ.ಟಿ.ರವಿ ಬಳಸಿದ ಅಶ್ಲೀಲ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಎಲ್ಲ ನಾಯಕರು ಜೊತೆಗೂಡಿ ಸಭಾಪತಿ ಬಳಿ ಹೋದೆವು ಎಂದು ವಿವರಿಸಿದರು.
ನಮ್ಮ ಮಾತನ್ನು ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಣ್ಣೀರು ಹಾಕಿದರು. ಬಳಿಕ ಅಲ್ಲಿದ್ದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಫೋನ್ ಮಾಡಿ ಘಟನೆಯನ್ನು ವಿವರಿಸಿದರು. ಯಾವುದೇ ಕಾರಣಕ್ಕೂ ಧೈರ್ಯಗೇಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದು ಆ ಸಮಯದಲ್ಲಿ ಎಲ್ಲರೂ ನನಗೆ ಧೈರ್ಯ ತುಂಬಿದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.