ಬೆಳಗಾವಿ ಅಧಿವೇಶನ | ವಕ್ಫ್ ಆಸ್ತಿಗಳಲ್ಲಿ ದೇವಸ್ಥಾನವಿದ್ದರೆ ಅದನ್ನು ಮುಟ್ಟುವುದಿಲ್ಲ : ಸಚಿವ ಝಮೀರ್ ಅಹ್ಮದ್
ಬೆಳಗಾವಿ : ವಕ್ಫ್ ಆಸ್ತಿಗಳಲ್ಲಿ ದೇವಸ್ಥಾನವಿದ್ದರೆ ಅದನ್ನು ನಾವು ಮುಟ್ಟುವುದಿಲ್ಲ. ಬಿಜೆಪಿಯವರಂತೆ 200 ವರ್ಷಗಳ ಹಳೆಯ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಕೆಲಸವನ್ನು ನಾವು ಮಾಡುವುದಿಲ್ಲ. ರೈತರಿಗೆ ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಷಯದ ಕುರಿತು ನಡೆದಿದ್ದ ಚರ್ಚೆಗೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡೆ ಬಿಜೆಪಿಯವರು ಉಪ ಚುನಾವಣೆಗೆ ಹೋದರು. ರಾಜ್ಯದ ಜನ ಇವರ ಸುಳ್ಳುಗಳಿಂದ ಬೇಸತ್ತು, ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿದರು ಎಂದು ಹೇಳಿದರು.
ರಾಜ್ಯದಲ್ಲಿ 1.28 ಲಕ್ಷ ಎಕರೆ ವಕ್ಫ್ ಆಸ್ತಿಯಿತ್ತು. ಅದೆಲ್ಲ ದಾನಿಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ನೀಡಿರುವಂತಹದ್ದು. ಖಬರ್‌ಸ್ಥಾನಗಳಿಗೆ ಹೊರತುಪಡಿಸಿ ಒಂದೇ ಒಂದು ಇಂಚು ಜಾಗವನ್ನು ಸರಕಾರದಿಂದ ವಕ್ಫ್ ಬೋರ್ಡ್ ಪಡೆದಿಲ್ಲ. 1.28 ಲಕ್ಷ ಎಕರೆಯಲ್ಲಿ ಇನಾಮ್ ರದ್ಧತಿ ಕಾಯ್ದೆಯಡಿ 47,263 ಎಕರೆ, ಭೂ ಸುಧಾರಣೆ ಕಾಯ್ದೆಯಡಿ 23,620 ಎಕರೆ, ಸರಕಾರದ ವಿವಿಧ ಯೋಜನೆಗಳಡಿ ಸುಮಾರು 3 ಸಾವಿರ ಎಕರೆ ಹೋಗಿದೆ. ಉಳಿದಿರುವುದು ಕೇವಲ 17,966 ಎಕರೆ ಮಾತ್ರ ಎಂದು ಅವರು ತಿಳಿಸಿದರು.
ಬಿಜಾಪುರದ ಹೊನ್ನವಾಡ ಗ್ರಾಮದಲ್ಲಿ ರೈತರ 2 ಸಾವಿರ ಎಕರೆ ಜಮೀನನ್ನು ವಕ್ಫ್ ಬೋರ್ಡ್ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಭಟನೆ ಮಾಡಿದರು. ಆದರೆ, ಆ ಗ್ರಾಮದಲ್ಲಿ ವಕ್ಫ್ ಆಸ್ತಿಯಿರುವುದು ಕೇವಲ 11 ಎಕರೆ ಮಾತ್ರ. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರ 2008-13ರ ವರೆಗೆ 1,100, 2019-23ರ ವರೆಗೆ 4,567 ಸೇರಿದಂತೆ ಒಟ್ಟು 5,667 ನೋಟಿಸ್‍ಗಳನ್ನು ನೀಡಿದೆ. ಕಾಂಗ್ರೆಸ್ ಸರಕಾರ 2013-18ರ ವರೆಗೆ ನೀಡಿರುವುದು 3,266 ನೋಟಿಸ್‍ಗಳು ಎಂದು ಝಮೀರ್ ಅಹ್ಮದ್ ತಿಳಿಸಿದರು.
ನಿಮ್ಮದೇ ಪಕ್ಷದ ಕೇಂದ್ರ ಸರಕಾರ ವಕ್ಫ್ ಆಸ್ತಿಗಳ ಜಿಪಿಎಸ್ ಮ್ಯಾಪಿಂಗ್ ಮಾಡಲು 5.99 ಕೋಟಿ ರೂ.ಗಳ ಅನುದಾನ ನೀಡಿದೆ. 2010 ರಿಂದ 2021ರ ವರೆಗೆ ಬಿಜೆಪಿ ಸರಕಾರ ಅಧಿಕಾರದಲ್ಲಿದಾಗಲೆಲ್ಲ ವಕ್ಫ್ ಆಸ್ತಿಗಳ ಸಂರಕ್ಷಣೆ, ಒತ್ತುವರಿ ತೆರವು, ದಾಖಲೆಗಳನ್ನು ಸಮರ್ಪಕಗೊಳಿಸುವ ಕುರಿತು 10 ಸರಕಾರಿ ಆದೇಶಗಳನ್ನು ಹೊರಡಿಸಿದೆ ಎಂದು ಅವರು ಉಲ್ಲೇಖಿಸಿದರು.
ವಕ್ಫ್ ಕಾಯ್ದೆಯನ್ನು ರದ್ದು ಮಾಡಿ ಎಂದು ವಿಪಕ್ಷದವರು ಆಗ್ರಹಿಸುತ್ತಿದ್ದಾರೆ. ಇದು ಕೇಂದ್ರ ಸರಕಾರ ಮಾಡಿರುವ ಕಾಯ್ದೆ. ಅದನ್ನು ರಾಜ್ಯದಲ್ಲಿ ತೆಗೆಯಲು ಹೇಗೆ ಸಾಧ್ಯ? 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಯಾಕೆ ಇನ್ನೂ ಈ ಕಾಯ್ದೆಯನ್ನು ತೆಗೆಯಲಿಲ್ಲ ಎಂದು ಪ್ರಶ್ನಿಸಿದ ಅವರು, ಎಲ್ಲಿ ಯಾವ ರೈತನಿಗೆ ವಕ್ಫ್‌ನಿಂದ ತೊಂದರೆಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಿ, ನಾನೇ ಖುದ್ದು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಸುಳ್ಳು ಮಾಹಿತಿಗಳನ್ನು ನೀಡಿ, ಅವರನ್ನು ಎತ್ತಿ ಕಟ್ಟುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಸರಕಾರ ರೈತರ ಪರವಾಗಿದೆ. ಅವರಿಗೆ ತೊಂದರೆಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.