ಉತ್ತರ ಕರ್ನಾಟಕ ಭಾಗದಲ್ಲಿ 432 ನವೋದ್ಯಮಗಳ ನೋಂದಣಿ : ಪ್ರಿಯಾಂಕ್ ಖರ್ಗೆ

Update: 2024-12-13 14:32 GMT

ಪ್ರಿಯಾಂಕ್ ಖರ್ಗೆ

ಬೆಳಗಾವಿ (ಸುವರ್ಣ ವಿಧಾನಸೌಧ) : ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದಡಿಯಲ್ಲಿ 432 ನವೋದ್ಯಮ ಉದ್ದಿಮೆಗಳು ಆರಂಭಕ್ಕೆ ನೋಂದಣಿಯನ್ನು ಮಾಡಿಕೊಂಡಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ನಡೆದ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ನಡೆದ ವಿಶೇಷ ಚರ್ಚೆ ಸಂದರ್ಭದಲ್ಲಿ ಅವರು ಉತ್ತರಿಸಿದರು.

ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆ, ಹೊಸ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ 432 ನವೋದ್ಯಮ ಉದ್ದಿಮೆಗಳ ಆರಂಭಕ್ಕೆ ನೋಂದಣಿ ಮಾಡಿಕೊಂಡಿದ್ದು ಆ ಮೂಲಕ ಈ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದ್ದು, ನಿಪುಣ ಕರ್ನಾಟಕ ಯೋಜನೆಯಡಿ ಕೂಡಾ ಈ ಭಾಗಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಐತಿಹಾಸಿಕ ಪ್ರಸಿದ್ಧ ದೇವಾಲಯಗಳಿದ್ದು, ಇಲ್ಲಿ ಟೆಂಪಲ್ ಟೂರಿಸಂ ಅಭಿವೃದ್ಧಿ ಪಡಿಸಬಹುದು ಅಲ್ಲದೆ, ಹೆಚ್ಚಿನ ಸಂಖ್ಯೆಯ ಅಣೆಕಟ್ಟುಗಳಿದ್ದು ಅವುಗಳ ಹಿನ್ನೀರಿನಲ್ಲಿ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಬಹುದಾಗಿದೆ. ಕರಡಿಧಾಮ, ಪಕ್ಷಿಧಾಮಗಳಿದ್ದು, ರೋಪ್ ವೇ ಮೂಲಕ ಆಕರ್ಷಿಸಬಹುದಾದ ಸ್ಥಳಗಳಿದ್ದು, ರಸ್ತೆ, ರೈಲು ಮಾತ್ತು ವಾಯು ಮಾರ್ಗದ ವ್ಯವಸ್ಥೆಯಿದ್ದು ಇವೆಲ್ಲವುಗಳನ್ನು ಬಳಸಿಕೊಂಡು ಈ ಭಾಗವನ್ನು ಅಭಿವೃದ್ಧಿಗೊಳಿಸಬೇಕು ಎಂದರು.

ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆ ಗಳ ಸ್ಥಾಪನೆ ಆಗಬೇಕು, ನೀರಾವರಿ ಸಮಸ್ಯೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ತಂದು ಬಗೆಹರಿಸಿಕೊಳ್ಳಬೇಕು ಎಂದರು. ಈ ವೇಳೆಯಲ್ಲಿ ಬಿಜೆಪಿ ಸದಸ್ಯ ಪ್ರತಾಪ್‍ಸಿಂಹ ನಾಯಕ್ ಮಾತನಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News