ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ 3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Update: 2025-03-23 15:49 IST
Photo of Lakshmi Hebbalkar

ಲಕ್ಷ್ಮೀ ಹೆಬ್ಬಾಳ್ಕರ್‌

  • whatsapp icon

ಬೆಳಗಾವಿ : ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸೋಮವಾರ ಮೂರು ಸಾವಿರ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ, ವಿಕಲಚೇತನರಿಗೆ ವಿವಿಧ ಸಲಕರಣೆಗಳ ವಿತರಣೆ ಹಾಗೂ ವಿಭಾಗೀಯ ಮಟ್ಟದ ಸ್ತ್ರೀ ಶಕ್ತಿ ಗುಂಪುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಗೃಹಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 3,000 ಗರ್ಭಿಣಿಯರಿಗೆ ಸೀರೆ, ಹೂವು, ಹಣ್ಣು ಕಾಯಿ, ಅರಿಶಿನ-ಕುಂಕುಮ, ಬಳೆ ಹೀಗೆ ಪಂಚ ಬಗೆಯ ಮಂಗಳಕರ ಸಾಮಗ್ರಿಗಳನ್ನೊಳಗೊಂಡು ಉಡಿ ತುಂಬುವ ಶಾಸ್ತ್ರದೊಂದಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದರು.

ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ 1,000 ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದು, ವಿಕಲಚೇತನರಿಗೆ - ತ್ರಿಚಕ್ರ ಸ್ಕೂಟರ್ ವಿತರಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಸ್ತ್ರೀಶಕ್ತಿ ಗುಂಪುಗಳನ್ನು ಉತ್ತೇಜಿಸಲು ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಮೇಳವನ್ನು ಆಯೋಜಿಸಲಾಗಿದ್ದು, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಾರವಾರ, ಗದಗ ಹಾಗೂ ಧಾರವಾಡ ಹೀಗೆ 7 ಜಿಲ್ಲೆಗಳ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಮ್ ಅಡಿ ಸ್ತ್ರೀ ಶಕ್ತಿ ಗುಂಪುಗಳು ಪಾಲ್ಗೊಂಡು ಸದರಿ ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ, ಬಟ್ಟೆ ವ್ಯಾಪಾರ, ತಿಂಡಿ-ತಿನಿಸುಗಳ ವ್ಯಾಪಾರ, ಲಂಬಾಣಿ ಉಡುಪು, ಬಿದಿರಿನಿಂದ ತಯಾರಿಸಿದ ವಸ್ತುಗಳು, ವಿವಿಧ ರೀತಿಯ ಬ್ಯಾಗಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬೇಟಿ ಬಚಾವೊ, ಬೇಟಿ ಫಡಾವೊ ಕಾರ್ಯಕ್ರಮದಡಿ ಹೆಣ್ಣು ಮಗುವಿನ ಹೆಸರಿನಲ್ಲಿ ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಸಚಿವರು, ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಿಂದ ಮೂರು ಸಾವಿರ ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿದೆ‌‌. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದ್ದು, ಮೊದಲ ಯತ್ನವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶುರು ಮಾಡಲಾಗುತ್ತಿದೆ. ಸೀಮಂತ ಕಾರ್ಯಕ್ರಮಕ್ಕೆ ಆಗಮಿಸುವ ಗರ್ಭಿಣಿಯರ ಸಂಪೂರ್ಣ ಆರೈಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು‌ ನೋಡಿಕೊಳ್ಳುತ್ತಾರೆ ಎಂದರು.

6ನೇ ಗ್ಯಾರಂಟಿ ಬಗ್ಗೆ ಸಿಎಂ ನಿರ್ಧಾರ :

ಕರ್ನಾಟಕದಲ್ಲಿ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಆರನೇ ಗ್ಯಾರಂಟಿ ನೀಡುವುದರ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳುವರು. 2017ರಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾಗ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಾಗಿತ್ತು. ಈಗ ಮತ್ತೆ ಅವರೇ ಗೌರವ ಧನವನ್ನು ಏರಿಸಿದ್ದಾರೆ. ಜೊತೆಗೆ 2023ರಿಂದ ನಿವೃತ್ತಿಯಾದವರಿಗೆ ಗ್ರ್ಯಾಚ್ಯುಟಿಯನ್ನು ನೀಡಿಲಾಗುತ್ತಿದೆ ಎಂದು ಸಚಿವರು ತಿಳಿಸಿದರು.‌

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಸಚಿವರ ಮಾಧ್ಯಮ ಸಲಹೆಗಾರರಾದ ಎಂ.ಕೆ.ಹೆಗಡೆ, ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್ ಉಪಸ್ಥಿತರಿದ್ದರು‌.

 ಸಿ.ಪಿ.ಎಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ :

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಿ.ಪಿ.ಎಡ್ ಆಟದ ಮೈದಾನದಲ್ಲಿ ಬೆಳಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News