ʼಅನುಭವ ಮಂಟಪ ಕಲಾಕೃತಿʼ ಮೇಲ್ಮನೆಯಲ್ಲಿ ಚರ್ಚೆಗೆ ನಕಾರ : ಶಶೀಲ್ ನಮೋಶಿ ಬೇಸರ

Update: 2024-12-17 23:35 IST
ʼಅನುಭವ ಮಂಟಪ ಕಲಾಕೃತಿʼ ಮೇಲ್ಮನೆಯಲ್ಲಿ ಚರ್ಚೆಗೆ ನಕಾರ : ಶಶೀಲ್ ನಮೋಶಿ ಬೇಸರ
  • whatsapp icon

ಬೆಳಗಾವಿ : ಸುವರ್ಣ ಸೌಧದಲ್ಲಿ ಅಳವಡಿಸಲಾಗಿರುವ ಅನುಭವ ಮಂಟಪದ ಮೂಲ ಕಲಾಕೃತಿ ವಿಷಯವಾಗಿ ಚರ್ಚೆಗೆ ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದರು.

ಮೂಲ ಕಲಾಕೃತಿ ರಚಿಸಿದವರಿಗೆ ಅಗೌರವ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯ ಶಶೀಲ್ ನಮೋಶಿ ಶೂನ್ಯವೇಳೆಯಲ್ಲಿ ಈ ವಿಷಯವಾಗಿ ಚರ್ಚೆಗೆ ಅವಕಾಶ ಕೋರಿದ್ದರು. ಚರ್ಚೆಯ ಪಟ್ಟಿಯಲ್ಲಿ ಅಡಕವಾಗಿ, ಈ ವಿಷಯ ಪ್ರಸ್ತಾಪಿಸಲು ನಮೋಶಿ ಅಣಿಯಾಗುತ್ತಿದ್ದಂತೆ, ಸಭಾಪತಿ ಬಸವರಾಜ ಹೊರಟ್ಟಿ ಅವರು, ಈ ಬಗ್ಗೆ ಚರ್ಚೆ ಬೇಡ, ಕೆಳಮನೆಯ ವಿಷಯವಾಗಿ ಇಲ್ಲಿ ಚರ್ಚಿಸುವುದು ಸೂಕ್ತವಲ್ಲ, ಮುಖ್ಯಮಂತ್ರಿಗಳೊಂದಿಗೆ ನಿಮ್ಮ ಸಮ್ಮುಖದಲ್ಲಿ ಮಾತನಾಡೋಣ ಎಂದರು.

ಆಗ ನಮೋಶಿ, ಈಗಾಗಲೇ ಪಟ್ಟಿಯಲ್ಲಿ ಸ್ವೀಕರಿಸಿದ್ದೀರಿ, ವಿಷಯ ಪ್ರಸ್ತಾಪಿಸುವೆ, ಸರಕಾರದ ನಿಲುವಾದರೂ ಗೊತ್ತಾಗುತ್ತದೆ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದರು. ಆದರೆ ಈ ವಿಷಯವಾಗಿ ಸಭಾಪತಿ ಹೊರಟ್ಟಿ ಅವಕಾಶ ನೀಡಲಿಲ್ಲ.

ನಂತರ ಲಿಖಿತವಾಗಿ ಈ ಬಗ್ಗೆ ಬೇಸರ ಹೊರಹಾಕಿರುವ ಸದಸ್ಯ ಶಶೀಲ್ ನಮೋಶಿ, ಅನುಭವ ಮಂಟಪದ ಮೂಲ ಕಲಾಕೃತಿ ರಚಿಸುವ ಕಲಾವಿದರಿಗೆ ಗೌರವ ದೊರಕಬೇಕು, ಕಲಬುರ್ಗಿ ಜಿಲ್ಲೆಯ ಜೆ.ಎಸ್.ಖಂಡೇರಾವ್ ಅವರು ಮೂಲ ಕಲಾಕೃತಿ ರಚಿಸಿದ್ದಾರೆ, ಆದರೆ, ಅವರ ಅನುಮತಿ ಇಲ್ಲದೇ ಅವರ ಗಮನಕ್ಕೂ ತಾರದೇ ನಕಲಿ ಕಲಾಕೃತಿಯನ್ನು ಅಳವಡಿಕೆ ಮಾಡಿರುವುದು ನೋವಿನ ಸಂಗತಿ, ಈ ವಿಷಯವಾಗಿಯೇ ನಾನು ಮಾತನಾಡಲು ಬಯಸಿದ್ದೆ, ಆದರೆ ಸಭಾಪತಿಗಳು ವ್ಯಾಪ್ತಿಗೆ ಬರುವುದಿಲ್ಲ ಎಂದು ಚರ್ಚೆಗೆ ಅವಕಾಶ ನೀಡದಿರುವುದು ಸಹ ನೋವು ತರಿಸಿದೆ, ಈ ನಡೆಯಿಂದಾಗಿ ನನಗೆ, ಮೂಲ ಕಲಾಕೃತಿ ರಚಿಸಿದ ಕಲಾವಿದರಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನತೆ ಅನ್ಯಾಯವಾದಂತಾಗಿದೆ ಎಂದು ನಮೋಶಿ ಬೇಸರ ಹೊರಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News