ಎರಡನೇ ಬಾರಿಯೂ ತಡರಾತ್ರಿಯ ವರೆಗೆ ಕಲಾಪ | ನಮಗೆ ಕೆಲಸ ಮುಖ್ಯವೇ ಹೊರತು ದಾಖಲೆಯಲ್ಲ : ಸ್ಪೀಕರ್ ಯು.ಟಿ.ಖಾದರ್

Update: 2024-12-19 07:40 GMT

ಯು.ಟಿ.ಖಾದರ್

ಬೆಳಗಾವಿ : ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಬುಧವಾರ(ಡಿ.17)ವು ಎರಡನೇ ಬಾರಿಗೆ ಮಧ್ಯರಾತ್ರಿ 12:40ರ ವರೆಗೆ ಅಧಿವೇಶನ ಕಲಾಪ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಬುಧವಾರ ಬೆಳಗ್ಗೆ 9.40ರಿಂದ ಮಧ್ಯರಾತ್ರಿ 12.40ರ ವರೆಗೆ ಸತತ 15 ಗಂಟೆಗಳ ಕಾಲ ನಿರಂತರವಾಗಿ ಸದನ ನಡೆಸಿದ ಸ್ಪೀಕರ್ ಎಂಬ ಖ್ಯಾತಿಗೆ ಖಾದರ್ ಅವರು ಭಾಜನರಾಗಿದ್ದಾರೆ. ಸೋಮವಾರ(ಡಿ.16) 15 ಗಂಟೆಗಳ ಅವಧಿ ಕಲಾಪ ನಡೆಸಿದ್ದರು. ಡಿ.17ರಂದು ಮಧ್ಯಾಹ್ನದ ಭೋಜನ ವಿರಾಮಕ್ಕೂ ಬಿಡುವು ನೀಡದೆ ಮಧ್ಯರಾತ್ರಿಯ ವರೆಗೂ ನಿರಂತರ ಕಲಾಪ ನಡೆಸಿದ್ದಾರೆ.

ಮಧ್ಯರಾತ್ರಿ ಕಲಾಪ ಮುಂದೂಡುವ ವೇಳೆ ಸದನದಲ್ಲಿ ಸ್ಪೀಕರ್, ಉಪಾಸಭಾಪತಿ, ನಾಲ್ವರು ಸಚಿವರು ಮತ್ತು 10 ಕಾಂಗ್ರೆಸ್, 6 ಮಂದಿ ಬಿಜೆಪಿ ಮತ್ತು ಓರ್ವ ಪಕ್ಷೇತರ ಶಾಸಕ ಸೇರಿ 17 ಸದಸ್ಯರು ಉಪಸ್ಥಿತರಿದ್ದರು. ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಮೇಲೆ ಮಧ್ಯರಾತ್ರಿಯ ವರೆಗೆ ಚರ್ಚೆ ನಡೆಸಿದರು.

ಎಲ್ಲರಿಗೂ ಅವಕಾಶ: ‘ಪ್ರತಿನಿತ್ಯ ಕಾರ್ಯಕಲಾಪಗಳ ಪಟ್ಟಿ ಮಾಡಿರುತ್ತೇವೆ, ಅದರಂತೆ ಕಲಾಪ ನಡೆಸಬೇಕು. ಸದಸ್ಯರು ಆಸಕ್ತಿಯಿಂದ ಪ್ರಶ್ನೆ ಕೇಳಿರುತ್ತಾರೆ, ಒಂದು ಪ್ರಶ್ನೆಗಾಗಿ ಹಲವು ಗಂಟೆ ಕಾದಿರುತ್ತಾರೆ. ಹೀಗಾಗಿ ಸದಸ್ಯರಿಗೆ ಅವಕಾಶ ಸಿಗಬೇಕು. ತಡರಾತ್ರಿ ವರೆಗೂ ಕಲಾಪ ನಡೆಸಿದ್ದು, ಕೆಲವರಿಗೆ ಬೇಸರ ಆಗಿರಬಹುದು. ಆದರೆ, ಅವರ ಪ್ರಶ್ನೆಗಳಿಗೆ ಉತ್ತರ ಕೊಡಿಸಿದ್ದೇನೆ’ ಎಂದು ಸ್ಪೀಕರ್ ಖಾದರ್ ತಿಳಿಸಿದರು.

‘ನಮಗೆ ಕೆಲಸ ಮುಖ್ಯವೇ ಹೊರತು, ಯಾವುದೇ ದಾಖಲೆಯಲ್ಲ. 8 ಗಂಟೆಗೆ ಮುಗಿಸಿ ಹೋಗಿದ್ದರೆ ಹೇಗೆ?. ಕೆಲವು ಶಾಸಕರಿಗೆ ಬೇಸರವಾಗುತ್ತಿದೆ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಮಧ್ಯಾಹ್ನದ ಊಟಕ್ಕೆ ವಿರಾಮಕ್ಕೂ ಅವಕಾಶ ನೀಡಿಲ್ಲ. ಯಾರು ಚರ್ಚೆಗೆ ಕೇಳಿದರೂ ಅವರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದೇವೆ. ಹಲವು ಗಂಭೀರವಾದ ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು ಸರಕಾರದಿಂದ ಉತ್ತರ ಕೊಡಿಸಲಾಗಿದೆ’ ಎಂದು ಖಾದರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News