ವಿಜಯೇಂದ್ರ ಕರೆಯುವ ಸಭೆ, ಔತಣಕೂಟಕ್ಕೆ ನಾನು ಹೋಗುವುದಿಲ್ಲ : ಯತ್ನಾಳ್

Update: 2024-12-17 14:29 GMT

 ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ: ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆಯುವ ಯಾವುದೇ ಸಭೆ ಅಥವಾ ಔತಣಕೂಟಕ್ಕೆ ನಾನು ಯಾವುದೇ ಕಾರಣಕ್ಕೂ ಹೋಗುವುದಿಲ್ಲ’ ಎಂದು ಬಿಜೆಪಿಯ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎದುರಿಗೆ ನಮಸ್ಕಾರ ಮಾಡುತ್ತಾರೆ. ಆದರೆ, ಒಳಗೊಳಗೆ ಏನು ಮಾಡುತ್ತಾರೆಂದು ಯಾರಿಗೆ ಗೊತ್ತಾಗುತ್ತದೆ. ಊಟಕ್ಕೆ ಕರೆದಿದ್ದರು, ಹೋಗೊದು-ಬಿಡೋದು ನನ್ನ ವಯಕ್ತಿಕ ವಿಚಾರ. ನಾನು ಅವರು ಕರೆದ ಸಭೆ ಮತ್ತು ಔತಣಕ್ಕೆ ಹೋಗುವುದಿಲ್ಲ ಎಂದು  ಹೇಳಿದರು.

ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಹಂತದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಹೋರಾಟ ಪ್ರಾರಂಭ ಮಾಡುತ್ತೇವೆ. ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲರನ್ನೂ ಹೋರಾಟಕ್ಕೆ ಆಹ್ವಾನಿಸುತ್ತೇವೆ. ಬರುವುದು-ಬಿಡುವುದು ಅವರಿಗೆ ಬಿಟ್ಡಿದ್ದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬದ ಸಮಾವೇಶ ಮಾಡುವುದಾದರೆ ಮಾಡಲಿ ಎಂದರು.

ವಸತಿ ಸಚಿವ ಝಮೀರ್ ಅಹ್ಮದ್ ಅವರನ್ನು ಸರಕಾರ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದೇನೆ. ಅವರ ಕಚೇರಿಗೆ ಹೋಗಿದ್ದೇನೆ. ನಾನೇನು ಅವರ ಮನೆಗೆ ಬಿರಿಯಾನಿ ತಿನ್ನಲು ಹೋಗಿಲ್ಲ. ನಮ್ಮ ಕ್ಷೇತ್ರದಲ್ಲಿ ವಸತಿ ಇಲಾಖೆಯಡಿ ಮನೆಗಳನ್ನು ನೀಡಿಲ್ಲ. ಹೀಗಾಗಿ ಬಡವರಿಗೆ ಅನ್ನಾಯವಾಗಿದೆ ಎಂದು ಪ್ರಶ್ನಿಸಿದ್ದೇನೆ. ಕ್ಷೇತ್ರದ ವಸತಿ ಸಮಸ್ಯೆ ಪರಿಹಾರಕ್ಕಾಗಿ ಅವರ ಬಳಿಗೆ ತೆರಳಿದ್ದೇನೆ ಎಂದು ಯತ್ನಾಳ್ ವಿವರಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News