ಮಲೆಮಹದೇಶ್ವರ ಬೆಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಣಯ: ಸಿಎಂ ಸಿದ್ದರಾಮಯ್ಯ

Update: 2025-04-25 14:19 IST
ಮಲೆಮಹದೇಶ್ವರ ಬೆಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಣಯ: ಸಿಎಂ ಸಿದ್ದರಾಮಯ್ಯ
  • whatsapp icon

ಚಾಮರಾಜನಗರ, ಏಪ್ರಿಲ್ 25 : ಗುರುವಾರ ನಡೆದ ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ಶುಚಿತ್ವ, ಪಾನನಿಷೇಧ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಶುಕ್ರವಾರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೌಢ್ಯಗಳು ಸಮಾಜದ ಪ್ರಗತಿಗೆ ಮಾರಕ

ಮೈಸೂರು ವಿಭಾಗದ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು, ಈ ಭಾಗಕ್ಕೆ ವಿಶೇಷ ಗಮನ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಇಂತಹ ಮೌಢ್ಯಗಳೇ ಸಮಾಜದ ಪ್ರಗತಿಗೆ ಮಾರಕವಾಗಿದೆ. ನಾನು ಇದುವರೆಗೆ ಸುಮಾರು 20 ಬಾರಿ ಜಿಲ್ಲೆಗೆ ಬಂದಿದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದರು.

ಮಲೆಮಹದೇಶ್ವರ ಅಭಿವೃದ್ಧಿಗೆ ನಿರ್ಣಯ

ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಸಭೆ ನಿನ್ನೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು, ಮದ್ಯ ನಿಷೇಧವಾಗಬೇಕು, ದೇವಸ್ಥಾನದ ವಿತರಿಸಲಾಗುವ ಲಡ್ಡು ಪ್ರಸಾದವನ್ನು ಗುಣಮಟ್ಟದಲ್ಲಿ ಹಾಗೂ ಕಡಿಮೆ ದರದಲ್ಲಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಲೆಮಹದೇಶ್ವರ ಸನ್ನಿಧಿಯ ಸುತ್ತಮುತ್ತಲ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕೆಂದು ನಿರ್ಣಯಿಸಲಾಗಿದೆ ಎಂದರು.

ಬಿಜೆಪಿಯವರ ಮೇಲೆ ಇಡಿ ದಾಳಿ ಆಗುವುದಿಲ್ಲ

ಶಾಸಕ ವಿನಯ್ ಕುಲಕರ್ಣಿಯವರ ಮನೆಯ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ‌ ಮಾತನಾಡಿ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣಕ್ಕಾಗಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯವರ ಮೇಲೆ ಯಾವುದೇ ಇಡಿ ದಾಳಿ ಆಗುವುದಿಲ್ಲ.

ಪ್ರಧಾನಿ ಮೋದಿಯವರು ಕಾಶ್ಮೀರ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ದಾಳಿಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವಿರುವುದು ಕಾಣುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News