ಹನೂರು | 12 ವರ್ಷದ ಬಾಲಕ ಆತ್ಮಹತ್ಯೆ

ಪ್ರಜ್ವಲ್
ಹನೂರು : ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 12 ವರ್ಷದ ಬಾಲಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಬಾಲಕನು ಲೊಕ್ಕನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಶೀಲಾ ರವರ ಪುತ್ರ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಪ್ರಜ್ವಲ್ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆ ಮಗುವಿನ ಕಾಲಿಗೆ ಪೆಟ್ಟಾಗಿದ್ದು, ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ಪ್ರಜ್ವಲ್, ಮಗುವಿಗೆ ಏನಾದರೂ ಆಗಿದೆಯೇ ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಘಟನೆ ತಿಳಿದು ಅಕ್ಕಪಕ್ಕದ ಮನೆಯವರು ತಕ್ಷಣ ಪ್ರಜ್ವಲ್ ನನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದಾಗ, ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್‌ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.