ಚಿಕ್ಕಮಗಳೂರು | ಭಾರೀ ಮಳೆ, ಗಾಳಿಯಿಂದಾಗಿ ಜಿಲ್ಲಾದ್ಯಂತ ವಿವಿಧ ಇಲಾಖೆಗಳಿಗೆ ಒಟ್ಟು 158 ಕೋಟಿ.ರೂ.ನಷ್ಟ

Update: 2024-07-31 14:04 GMT

ಚಿಕ್ಕಮಗಳೂರು : ಈ ಬಾರಿ ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಸರಕಾರಿ ಇಲಾಖೆಗಳ ಸಾರ್ವಜನಿಕ ಆಸ್ತಿ ಸೇರಿದಂತೆ ಸಾರ್ವಜನಿಕರ ಮನೆಗಳು, ರೈತರ ಕೃಷಿ, ತೋಟಗಾರಿಗೆ ಬೆಳೆಗಳಿಗೂ ಭಾರೀ ನಷ್ಟ ಉಂಟಾಗಿದೆ. ಕೃಷಿ, ತೋಟಗಾರಿಕೆ, ಕಾಫಿ ಬೆಳೆ ಹಾನಿ ಹೊರತುಪಡಿಸಿ ಜಿಲ್ಲೆಯಲ್ಲಿ ಮೆಸ್ಕಾಂ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಸ್ತಿಗಳಿಗೆ ಒಟ್ಟು 158 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಜಿಲ್ಲೆಯಲ್ಲಿ ವಾಡಿಕೆಯಂತೆ ಜನವರಿಯಿಂದ ಜು.29ರವರೆಗೆ 992 ಮಿಮೀ. ಮಳೆಯಾಗಬೇಕಿತ್ತು, ಆದರೆ ಈ ಬಾರಿ 1306 ಮಿ.ಮೀ. ಸರಾಸರಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 1314.6 ವಾಡಿಕೆ ಮಳೆಗೆ ಬದಲಾಗಿ 1094.7 ಮಿ.ಮೀ. ಮಳೆಯಾದರೆ, ಮೂಡಿಗೆರೆಯಲ್ಲಿ 1314.6ಕ್ಕೆ ಬದಲಾಗಿ 1866.7 ಮಿ.ಮೀ. ಮಳೆಯಾಗಿದೆ. ಕಳಸದಲ್ಲಿ 2061.1 ಮಿ.ಮೀ.ವಾಡಿಕೆ ಮಳೆ ಇದ್ದರೇ, ಈ ಬಾರಿ 2332.8 ಮಿ.ಮೀ. ಮಳೆಯಾಗಿದೆ.

ಜಿಲ್ಲಾದ್ಯಂತ ಈ ಬಾರಿ ಸುರಿದ ಭಾರೀ ಮಳೆ ಹಾಗೂ ಒಂದು ವಾರ ಬೀಸಿದ ಬಿರುಗಾಳಿಯಿಂದಾಗಿ ಮೆಸ್ಕಾಂ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳೂ ಸೇರಿದಂತೆ ವಿವಿಧ ಇಲಾಖೆಗಳ ರಸ್ತೆ, ವಿದ್ಯುತ್‍ ಕಂಬ, ವಿದ್ಯುತ್‍ಲೈನ್, ಶಾಲಾ ಮತ್ತು ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಒಟ್ಟು 158 ಕೋಟಿ ರೂ. ನಷ್ಟ ಸಂಭವಿಸಿದೆ. ಮಲೆನಾಡು ಮತ್ತು ಬಯಲು ಭಾಗದಲ್ಲಿ ಒಟ್ಟು 350 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 231 ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೆ, 119 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 97, ಕಡೂರು 33, ತರೀಕೆರೆ 15, ಅಜ್ಜಂಪುರ 17, ಮೂಡಿಗೆರೆ 91, ಕೊಪ್ಪ 19, ಶೃಂಗೇರಿ 11, ನರಸಿಂಹರಾಜಪುರ 50, ಕಳಸದಲ್ಲಿ 17 ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ಗಾಳಿಮಳೆಗೆ ಧರಶಾಹಿಯಾಗಿದ್ದರೆ, ಉಳಿದ ಮನೆಗಳು ಮರಬಿದ್ದು ಹಾನಿಗೊಳಗಾಗಿವೆ.

ಮೆಸ್ಕಾಂ ಇಲಾಖೆಯಲ್ಲಿ 3067 ವಿದ್ಯುತ್‍ ಕಂಬಗಳು ಧರೆಗುರುಳಿದಿದ್ದು, ಇದುವರೆಗೆ 2025ಕಂಬಗಳನ್ನು ಬದಲಾಯಿಸಲಾಗಿದೆ. ಒಟ್ಟು 7 ಟ್ರಾನ್ಸ್‌ ಫಾರ್ಮರ್ ಗಳಿಗೆ ಹಾನಿಯಾಗಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ 1019 ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದರೆ, 626 ಕಂಬಗಳನ್ನು ಬದಲಾಯಿಸಲಾಗಿದೆ. ಮೂಡಿಗೆರೆಯಲ್ಲಿ 308 ಕಂಬಗಳಿಗೆ ಹಾನಿಯಾಗಿದ್ದರೆ 205 ಬದಲಾವಣೆ ಮಾಡಲಾಗಿದೆ. 

ಮಳೆ ಬಿಡುವುದು ನೀಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಲೈನ್‍ಗಳ ದುರಸ್ತಿ ಕೆಲಸ ಭರದಿಂದ ನಡೆಯುತ್ತಿದ್ದು, ವಿದ್ಯುತ್‍ ಕಂಬಗಳು ಧರೆಗೆ ಉರಳಿದ ಪರಿಣಾಮ ಮೆಸ್ಕಾಂ ಇಲಾಖೆ 4.78 ಕೋಟಿ ರೂ. ನಷ್ಟವಾಗಿದೆ. 61.34 ಕಿಮೀ. ವಿದ್ಯುತ್‍ ಲೈನ್‍ಗಳಿಗೆ ಹಾನಿಯಾಗಿದ್ದು, 40.50 ಲಕ್ಷ ರೂ. ನಷ್ಟವಾಗಿದೆ. ಒಟ್ಟಾರೆ ಮೆಸ್ಕಾಂ ಇಲಾಖೆಗೆ ಈ ಬಾರಿಯ ಮಳೆ ಹಾಗೂ ಗಾಳಿಯಿಂದಾಗಿ 5.31 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಜಿಲ್ಲೆಯ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 381 ಕಿ.ಮೀ. ರಸ್ತೆಗಳಿಗೆ ಹಾನಿಯಾಗಿ 46.12 ಕೋಟಿ ನಷ್ಟವಾಗಿದೆ. 32 ಸೇತುವೆ ಹಾಗೂ ಮೋರಿಗಳಿಗೆ ಹಾನಿಯಾಗಿ 6.57 ಕೋಟಿ. ರೂ., 7 ವಾಟರ್ ಟ್ಯಾಂಕ್‍ಗಳಿಗೆ ಹಾನಿಯಾಗಿ 54.50 ಲಕ್ಷ ರೂ. ನಷ್ಟವಾಗಿದೆ. ಸರಕಾರಿ ಶಾಲೆಯ 12 ಕಟ್ಟಡಗಳಿಗೆ, 73 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿ 86.50 ಲಕ್ಷ ರೂ., 10 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿ 1.17 ಕೋಟಿ ರೂ. ಸೇರಿದಂತೆ ಒಟ್ಟು 55.28 ಕೋಟಿ. ರೂ. ನಷ್ಟ ಉಂಟಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 34.90 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 47.56ಕೋಟಿ. ರೂ. ನಷ್ಟವಾಗಿದ್ದರೆ, 54 ಸೇತುವೆಗಳಿಗೆ ಹಾನಿ ಸಂಭವಿಸಿ 49.84 ಕೋ. ರೂ. ನಷ್ಟವಾಗಿದೆ. ಲೋಕೋಪಯೋಗಿ ಇಲಾಖೆಗೆ ಒಟ್ಟು 97.40 ಕೋಟಿ ರೂ. ನಷ್ಟ ಸಂಭವಿಸಿದೆ.

ಹಾನಿಯ ಸಮೀಕ್ಷಾ ವರದಿ ಶೀಘ್ರ ಸಿದ್ಧವಾಗಲಿದೆ : ಕೃಷಿ, ತೋಟಗಾರಿಕೆ ಬೆಳೆಗಳಿಗೂ ಈ ಬಾರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿಗಳ ಪ್ರವಾಹದ ನೀರು ಅಕ್ಕಪಕ್ಕದ ಹೊಲ ಗದ್ದೆಗಳು, ಶುಂಠಿ, ಭತ್ತದ ಗದ್ದೆ, ಅಡಿಕೆ, ಕಾಫಿ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೃಷಿ, ತೋಟಗಾರಿಕೆ ಬೆಳೆ ಹಾನಿ ನಷ್ಟದ ವರದಿಯನ್ನು ಜಿಲ್ಲಾಡಳಿತ ಸಂಗ್ರಹಿಸುತ್ತಿದ್ದು, ಕಾಫಿ ಮಂಡಳಿಯಿಂದ ಕಾಫಿ ಬೆಳೆಗೆ ಆಗಿರುವ ಹಾನಿಯ ವರದಿ ಸಿದ್ಧಪಡಿಸಲಾಗುತ್ತಿದೆ. ಹಾನಿಯ ಸಮೀಕ್ಷಾ ವರದಿ ಶೀಘ್ರ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News