ಚಿಕ್ಕಮಗಳೂರು | ನ್ಯಾಯಾಧೀಶರಿಂದ ಅಂಬೇಡ್ಕರ್‌ಗೆ ಅಪಮಾನ; ದಲಿತ ಸಂಘಟನೆಗಳ ಒಕ್ಕೂಟ ಆರೋಪ

ಚಿಕ್ಕಮಗಳೂರು : ನಗರದಲ್ಲಿ ಜ.26ರಂದು ಸಂಜೆ ಸರ್ವಧರ್ಮ ವೇದಿಕೆ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿ ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಹಾಸನದ ನ್ಯಾಯಾಧೀಶರು ಬಹಿರಂಗ ಕ್ಷಮೆ ಕೇಳಬೇಕು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ಸಮನ್ವಯ ವೇದಿಕೆಯಿಂದ ಜ.26ರಂದು ಆಝಾದ್ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ 75ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದ ಹಾಸನ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ಎಂಬವರು ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ. ಮಂಗಳೂರಿನ ಬಿ.ಎನ್.ರಾವ್ ಅವರು ಸಂವಿಧಾನದ ಕರಡು ಸಿದ್ಧಪಡಿಸಿದ್ದಾರೆ ಎನ್ನುವ ಮೂಲಕ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಭಾರತದ ಸಂವಿಧಾನ ಕರಡು ಪ್ರತಿಯನ್ನು ಅಂಬೇಡ್ಕರ್ ರಚಿಸಿಲ್ಲ. ಬದಲಾಗಿ ಬಿ.ಎನ್.ರಾವ್ ರಚಿಸಿದ್ದಾರೆ. ಅವರು ವಿಶ್ವದ ಅನೇಕ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂವಿಧಾನ ಅಧ್ಯಯನ ಮಾಡಿ ಭಾರತ ಸಂವಿಧಾನದ ಕರಡು ರಚನೆ ಮಾಡಿದ್ದರು. ಬಿ.ಎನ್.ರಾವ್ ರಚಿಸಿದ ಸಂವಿಧಾದ ಕರಡು ಪ್ರತಿಯನ್ನು ಅಂಬೇಡ್ಕರ್ ಅವರು ಸಂವಿಧಾನ ಸಭೆ ಮುಂದೆ ಹಾಜರುಪಡಿಸಿದ್ದಾರೆ ಎಂದು ಹೇಳಿದ್ದು, ಇದು ಸಭೆಯಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಅನುಯಾಯಿಗಳು, ಸರ್ವ ಧರ್ಮದ ಮುಖಂಡರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ನ್ಯಾಯಾಧೀಶರು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿರುವುದು ಸರಿಯಲ್ಲ. ಆದ್ದರಿಂದ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತಿದೆ. ಅವರೇ ಸಂವಿಧಾನ ರಚಿಸಿರುವುದಾಗಿ ಸಂವಿಧಾನ ಕರಡು ಸಮಿತಿ ಸದಸ್ಯರು ಒಪ್ಪಿಕೊಂಡಿದ್ದಾರೆ. ಅಂಬೇಡ್ಕರ್ ಅವರೇ ಸಂವಿಧಾನ ಕರಡು ರಚಿಸಿರುವುದಾಗಿ ಸಂವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಅಂಬೇಡ್ಕರ್ ಬರಹ ಮತ್ತು ಭಾಷಣ, ಕೃತಿಗಳಲ್ಲಿ ಬಿ.ಎನ್.ರಾವ್ ಅವರು ಸಂವಿಧಾನದ ಕರಡು ಪ್ರತಿ ರಚಿಸಿರುವ ಬಗ್ಗೆ ಉಲ್ಲೇಖವಿಲ್ಲ ಎಂದ ಅವರು, ರವಿಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರಿನ ಪತ್ರ ಬರೆಯಲಾಗಿದೆ ಎಂದ ಅಣ್ಣಯ್ಯ, ನ್ಯಾಯಾಧೀಶರು ತರಂಗ ಮ್ಯಾಗಝಿನ್‌ನ ವರದಿ ಉಲ್ಲೇಖಿಸಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮ್ಯಾಗಝಿನ್ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ಛಲವಾದಿ ಮಹಾಸಭಾದ ರಘು, ರಮೇಶ್, ಸಂತೋಷ್, ಬಾಲಕೃಷ್ಣ, ಚಂದ್ರಶೇಖರ್, ಅರುಣ್‌ಕುಮಾರ್, ದಂಟರಮಕ್ಕಿ ಶ್ರೀನಿವಾಸ್, ಡಾ.ಶಿವಪ್ರಸಾದ್ ಉಪಸ್ಥಿತರಿದ್ದರು.