ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಕಾಡ್ಗಿಚ್ಚು: ಹುಲ್ಲುಗಾವಲು, ಅರಣ್ಯ ಪ್ರದೇಶ ಬೆಂಕಿಗಾಹುತಿ

Update: 2025-02-26 17:34 IST
ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಕಾಡ್ಗಿಚ್ಚು: ಹುಲ್ಲುಗಾವಲು, ಅರಣ್ಯ ಪ್ರದೇಶ ಬೆಂಕಿಗಾಹುತಿ
  • whatsapp icon

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರುಮನೆ ಗುಡ್ಡದಲ್ಲಿ ಮಂಗಳವಾರ ರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮದಿಂದಾಗಿ ಬೆಂಕಿ ಇಡೀ ಅರಣ್ಯಕ್ಕೆ ವ್ಯಾಪಿಸುವುದು ತಪ್ಪಿದೆ.

ಕೊಟ್ಟಿಗೆಹಾರ ಸಮೀಪದ ಬಾಳೂರು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ದೇವರುಮನೆ ಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ತ್ವರಿತ ಕಾರ್ಯಾಚರಣೆಯ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರದೇಶಕ್ಕೆ ಪ್ರವಾಸಿಗರು ಹಾಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಕಾಡ್ಗಿಚ್ಚಿನಿಂದ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಹುಲ್ಲುಗಾವಲು, ಗಿಡಗಂಟಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರಂಜಿತ್, ಗಸ್ತು ಅರಣ್ಯ ಪಾಲಕ ಅಭಿಜಿತ್, ಉಮೇಶ್ ಮತ್ತು ಅರಣ್ಯ ವೀಕ್ಷಕ ದಿನೇಶ್ ಅವರ ತಂಡ ದುರಂತವನ್ನು ತಡೆಯಲು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಅವರು ತಕ್ಷಣವೇ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಕೈಗೊಂಡುದರಿಂದ ದೊಡ್ಡ ಪ್ರಮಾಣದ ಹಾನಿ ತಪ್ಪಿತು. ಇಲ್ಲಿನ ಐತಿಹಾಸಿಕ ಸ್ಥಳದ ಸುರಕ್ಷತೆಗಾಗಿ ಹಾಗೂ ಇಂತಹ ಘಟನೆಗಳು ಪುನರಾವೃತಗೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದಲ್ಲಿ ನಿಗಾ ದಳವನ್ನು ಬಿಗಿಗೊಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳಸ ತಾಲೂಕಿನ ಅಲ್ಲಲ್ಲಿ ಕಾಡ್ಗಿಚ್ಚು: ಕಳಸ ತಾಲೂಕಿನ ಬಲಿಗೆ ಹಾಗೂ ಮಾವಿನಹೊಲ ಗ್ರಾಮಗಳ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲೂ ಮಂಗಳವಾರ ರಾತ್ರಿ ಕಾಡಿಗೆ ಬೆಂಕಿ ಬಿದ್ದಿದ್ದು, ಬೆಂಕಿಯಿಂದಾಗಿ ಹತ್ತಾರು ಎಕರೆ ಹುಲ್ಲುಗಾವಲು, ಅರಣ್ಯ ಪ್ರದೇಶಕ್ಕೆ ಬೆಂಕಿಗೆ ಆಹುತಿಯಾಗಿದೆ. ಇಲಾಖೆ ಸಿಬ್ಬಂದಿ ಬೆಂಕಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.

ಚಂದ್ರದ್ರೋಣ ಗಿರಿ ಶ್ರೇಣಿಯಲ್ಲಿ ಕಾಡ್ಗಿಚ್ಚಿಗೆ ಡ್ರೋನ್ ಕಣ್ಗಾವಲು: ಕಾಫಿನಾಡಿನಲ್ಲಿ ಸದ್ಯ ಬಿಸಿಲಧಗೆ ತೀವ್ರಗೊಂಡಿದ್ದು, ದಟ್ಟಾರಣ್ಯದ ವ್ಯಾಪ್ತಿಯ ಅಲ್ಲಲ್ಲಿ ಈಗಾಗಲೇ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಜಿಲ್ಲೆಯ ಕಳಸ, ಮೂಡಿಗೆರೆ, ಕೊಪ್ಪ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲೂ ಕಾಡ್ಗಿಚ್ಚಿನಿಂದಾಗಿ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಚಂದ್ರದ್ರೋಣ ಗಿರಿಶ್ರೇಣಿಯ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಶ್ರೇಣಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಪತ್ತೆಗೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾಗಳ ಮೂಲಕ ಕಾಣ್ಗಾವಲು ಇರಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೆಂಕಿ ಕಾಣಿಸಿಕೊಳ್ಳಬಹುದಾದ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮರಗಳ ಮೂಲಕ ಗಿರಿ ಶ್ರೇಣಿಯ ದೃಶ್ಯಗಳನ್ನು ಸೆರೆ ಹಿಡಿದು ಬೆಂಕಿ ಬಿದ್ದ ಪ್ರದೇಶಗಳಿಗೆ ಶೀಘ್ರ ದೌಡಾಯಿಸುವುದು, ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡುವಂತಹ ಮೂಲಕ ಅರಣ್ಯ ಬೆಂಕಿಗೆ ಆಹುತಿಯಾಗುವುದನ್ನು ತಡೆಯಲು ಮುಂದಾಗಿದೆ. ಮಂಗಳವಾರ ರಾತ್ರಿ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಿಸಿದ ಬಳಿಕ ಅರಣ್ಯ ಇಲಾಖೆ ಡ್ರೋಣ್ ಕ್ಯಾಮರಾಗಳ ಸಹಾಯದಿಂದ ಕಾಡ್ಗಿಚ್ಚಿನ ಮೇಲೆ ಕಣ್ಗಾವಲಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News