ಅಧಿಕಾರಕ್ಕೆ ಯಾರೇ ಆಸೆ ಪಟ್ಟರೂ ತಪ್ಪಿಲ್ಲ: ಸಚಿವ ಕೆ.ಎಸ್. ರಾಜಣ್ಣ
ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಧಿಕಾರಕ್ಕಾಗಿ ಆಸೆಪಟ್ಟರೇ ತಪ್ಪಿಲ್ಲ. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳುತ್ತದೆ ಎಂದು ಸಹಕಾರ ಸಚಿವ ಕೆ.ಎಸ್.ರಾಜಣ್ಣ ಹೇಳಿದರು.
ರವಿವಾರ ಶೃಂಗೇರಿ ಶಾರದಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ದಲಿತರಿಗೆ ಅವಕಾಶ ನೀಡಬೇಕೆಂಬ ಸಚಿವ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಭಯಸುವುದು ತಪ್ಪಲ್ಲ. ಎಲ್ಲರಿಗೂ ಅರ್ಹತೆ ಇರುವುದರಿಂದ ಕೇಳುತ್ತಾರೆ. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ತೀರ್ಮಾನ ತಗೆದು ಕೊಳ್ಳುತ್ತದೆ, ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆಂದರು.
ಮುನಿಯಪ್ಪ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳುತ್ತದೆ, ಯಾರೆಲ್ಲ ಸಿ.ಎಂ. ಆಗಬೇಕೆನ್ನುತ್ತಾರೋ ಅವರೆಲ್ಲರ ಪರ ಧ್ವನಿಗೂಡಿಸುತ್ತೇನೆ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ. ಸಭೆ ಪೂರ್ಣಗೊಂಡ ನಂತರ ಆ ಬಗ್ಗೆ ಅಂತಿಮ ನಿರ್ಣಯವಾಗಲಿದೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ತೀರ್ಮಾನಗಳನ್ನು ತಗೆದುಕೊಂಡರೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಚುನಾವಣೆಗಳು ನಡೆಯುತ್ತಿವೆಯೆಂದು ಸರಕಾರ ಏನು ಕೆಲಸವೇ ಮಾಡಬಾರದೇ ಎಂದ ಅವರು, ಸ್ಥಳೀಯ ಪಂಚಾಯತ್ ಕ್ಷೇತ್ರಗಳ ಬಗ್ಗೆ ಸರಕಾರದ ತೀರ್ಮಾನದಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಾರದು ಎಂಬ ದೃಷ್ಟಿಯಿಂದ ನೀತಿಸಂಹಿತೆ ಉಲ್ಲಂಘನೆಯಾಗದಂತೆ ತೀರ್ಮಾನಗಳನ್ನು ಸಭೆಯಲ್ಲಿ ತಗೆದುಕೊಳ್ಳಲಾಗುವುದು ಎಂದರು.