ಚಿಕ್ಕಮಗಳೂರು | ಉರೂಸ್ ವೇಳೆ ಶಾಖಾದ್ರಿ ಧಾರ್ಮಿಕ ಆಚರಣೆಗೆ ಅವಕಾಶ ನೀಡದ ಜಿಲ್ಲಾಡಳಿತ : ಗೌಸ್ ಮೊಹಿದ್ದೀನ್ ಶಾಖಾದ್ರಿ ಆರೋಪ
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡಾನ್‌ಗಿರಿ ದರ್ಗಾದಲ್ಲಿ ನಡೆಯುವ ಉರೂಸ್ ಸಂದರ್ಭ ಶಾಖಾದ್ರಿ ಅವರಿಗೆ ದರ್ಗಾದ ಗುಹೆಯೊಳಗೆ ದಾರ್ಮಿಕ ಆಚರಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲು ನಿರಾಕರಿಸುತ್ತಿದೆ ಎಂದು ಗೌಸ್ ಮೊಹಿದ್ದೀನ್ ಶಾಖಾದ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.26ರಂದು ಬಾಬಾ ಬುಡಾನ್‌ದರ್ಗಾದಲ್ಲಿ ಪ್ರತೀ ವರ್ಷದಂತೆ ಸಂದಲ್ ಉರೂಸ್ ನಡೆಯಲಿದ್ದು, ಈ ಉರೂಸ್ ಸಂದರ್ಭ ಶಾಖಾದ್ರಿ ಅವರಿಗೆ ಗುಹೆಯೊಳಗೆ ಪ್ರವೇಶಿಸಿ ಗಂಧ ಲೇಪನದೊಂದಿಗೆ ಹಿರಿಯರ ಗೋರಿಗಳಿಗೆ ಹಸಿರು ಹೊದಿಕೆ ಹಾಕಲು ಹಾಗೂ ಧಾರ್ಮಿಕ ವಿಧಿ ಕೈಗೊಳ್ಳಲು ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದೆ. ಆದರೆ, ನ್ಯಾಯಾಲಯದ ಆದೇಶದಲ್ಲಿ ಉರೂಸ್ ವೇಳೆ ಗುಹೆಯೊಳಗೆ ಪ್ರವೇಶ ನೀಡುವುದಾಗಿ ತಿಳಿಸಿದ್ದರೂ ಮಾ.26ರಂದು ನಡೆಯುವ ಧಾರ್ಮಿಕ ಆಚರಣೆ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಉರೂಸ್ ಆಚರಣೆ ಸಂಬಂಧ ಜನವರಿ 2024ರಂದು ಸುಪ್ರೀಂ ಕೋಟ್‌ನಲ್ಲಿ ದಾವೆ ಹೂಡಿದ್ದು, ಮಾ.15ಕ್ಕೆ ಈ ಸಂಬಂಧ ನ್ಯಾಯಾಲಯ ಆದೇಶ ನೀಡಿದೆ. ಆದೇಶದಲ್ಲಿ ಶಾಖಾದ್ರಿ ಅವರಿಗೆ ಗುಹೆ ಪ್ರವೇಶಕ್ಕೆ ಹಾಗೂ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಆದೇಶಿಸಿದೆ. ಈ ಆದೇಶವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಆದೇಶದಿಂದ ಮಾ.26ರಂದು ನಡೆಯುವ ಉರೂಸ್ ವೇಳೆ ದರ್ಗಾದ ಗುಹೆಯೊಳಗೆ ಪ್ರವೇಶ ಹಾಗೂ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕೆಂದು ಕೇಳಿದ್ದೆವು. ಇದಕ್ಕೆ ಜಿಲ್ಲಾಡಳಿತ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ. ದರ್ಗಾದ ಮುಜಾವರ್ ಹಿಂಬದಿಯಲ್ಲಿ ನಿಂತು ಶಾಖಾದ್ರಿ ಪ್ರಾರ್ಥನೆ ಮಾಡಲು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿದೆ. ಗುಹೆಯೊಳಗೆ ಗಂಧ, ಹಸಿರು ಹೊದಿಕೆ ಹಾಕುವಂತಹ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಆದೇಶಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ ಎಂದು ದೂರಿದರು.
ಮಾ.25ರಂದು ಮಂಗಳವಾರ ಉರೂಸ್ ನಡೆಯಲಿದ್ದು, ಈ ವೇಳೆ ನ್ಯಾಯಾಲಯದ ಆದೇಶದಂತೆ ಉರೂಸ್ ಸಂಪ್ರದಾಯದಂತೆ ಗುಹೆಯೊಳಗೆ ಗಂಧ ಲೇಪನ ಹಾಗೂ ಹಸಿರು ಬಟ್ಟೆ ಹಾಕಲು ಶಾಖಾದ್ರಿಯಾದ ತನಗೆ ಜಿಲ್ಲಾಡಳಿತ ಅವಕಾಶ ನೀಡಬೇಕು. ತಪ್ಪಿದಲ್ಲಿ ಉರೂಸ್ ಬಹಿಷ್ಕರಿಸುವ ಮೂಲಕ ಸರಕಾರ, ಜಿಲ್ಲಾಡಳಿತದ ನಡೆಯನ್ನು ಖಂಡಿಸಲಾಗುವುದು ಎಂದರು.