ಬಾರದ ಮಳೆ, ಮೌಢ್ಯದ ಮೊರೆ ಮೋದ ಗ್ರಾಮಸ್ಥರು | ಹೂತಿಟ್ಟ ಮೃತದೇಹ ಹೊರತೆಗೆದು ಸುಟ್ಟರು !

Update: 2024-05-18 15:41 GMT

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಜಿಲ್ಲೆಯ ಬಯಲು ಭಾಗದಲ್ಲಿ ಮಾತ್ರ ಮಳೆಯ ಸುಳಿವು ಇಲ್ಲದಂತಾಗಿದ್ದು, ಹನಿ ನೀರಿಗೂ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಕುಡಿಯುವ ನೀರಿಗಂತೂ ಹಾಹಾಕಾರ ಎದ್ದಿದ್ದು, ಟ್ಯಾಂಕರ್ ನೀರೇ ಇಲ್ಲಿನ ಜನರಿಗೆ ಗತಿ ಎಂಬಂತಾಗಿದೆ. ಅಜ್ಜಂಪುರ ತಾಲೂಕಿನ ಅಲ್ಲಲ್ಲಿ ಕಳೆದ ಕೆಲ ದಿನಗಳಿಂದ ಸಾಧಾರಣ ಮಳೆಯಾಗಿದ್ದರೂ ಶಿವನಿ ಗ್ರಾಮದಲ್ಲಿ ಮಾತ್ರ ಒಂದು ಹನಿ ಮಳೆ ನೀರು ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಶಿವನಿ ಗ್ರಾಮದ ಕೆಲ ಜನರು ಮಳೆಗಾಗಿ ಮೌಢ್ಯದ ಮೊರೆ ಹೋಗಿದ್ದು, ಹೂತಿದ್ದ ಮೃತದೇಹಗಳನ್ನು ಹೊರ ತೆಗೆದು ಸುಟ್ಟು ಹಾಕಿರುವ ಕಳವಳಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾಫಿನಾಡು ಚಿಕ್ಕಮಗಳೂರಿನ ಬಯಲು ಭಾಗವಾದ ಅಜ್ಜಂಪುರ ತಾಲೂಕಿನ ಶಿವನಿ, ಜಲದಿಹಳ್ಳಿ, ಚಿಕ್ಕಾನವಂಗಲ, ತಿಮ್ಮಾಪುರ, ಬುಕ್ಕಾಂಬುದಿ, ಚೀರನಹಳ್ಳಿ, ಕಾರೇಹಳ್ಳಿ, ದಂದೂರು, ಕಲ್ಲೇನಹಳ್ಳಿ, ಹರಳಹಳ್ಳಿ ನಾಗೇನಹಳ್ಳಿ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಈ ಭಾಗದ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಕಳೆದ ಮೂರು ತಿಂಗಳಿನಿಂದ ಟ್ಯಾಂಕರ್ ನೀರನ್ನು ಅಡಿಕೆ ತೋಟಗಳಿಗೆ ಪೂರೈಕೆ ಮಾಡುತ್ತಿದ್ದರೂ ಈ ನೀರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಎಷ್ಟು ನೀರು ಪೂರೈಸಿದರೂ ರೈತರ ಹಣ ನೀರಿನಂತೆ ಖರ್ಚಾಗುತ್ತಿದೆಯೇ ಹೊರತು, ಬಿಸಿಲ ಧಗೆಗೆ ತೋಟ ಉಳಿಯುತ್ತಿಲ್ಲ.

ಶಿವನಿ ಹೋಬಳಿಯ ಸುತ್ತಮುತ್ತಲೂ ಕಳೆದೊಂದು ವಾರದಿಂದ ಒಂದಷ್ಟು ಮಳೆಯಾಗಿದೆ. ಗುರುವಾರ ಸಂಜೆ ಕೆಲ ಹೊತ್ತು ಮಳೆಯಾಗಿದೆ. ಆದರೂ ನೀರಿನ ಹಾಹಾಕಾರ ಮುಂದುವರಿದಿದ್ದು, ಮಳೆ ಇಲ್ಲದೇ ರೋಸಿ ಹೋಗಿರುವ ಜನರೆ ಮಳೆಗಾಗಿ ಮೌಢ್ಯಾಚರಣೆಗೂ ಮುಂದಾಗಿದ್ದಾರೆ. ಹೂತಿಟ್ಟ ಮೃತದೇಹಗಳನ್ನು ಹೊರ ತೆಗೆದು ಸುಟ್ಟು ಹಾಕಿದರೇ ಮಳೆ ಬರುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಹೂತಿಟ್ಟ  ಮೃತದೇಹಗಳನ್ನು ಹೊರ ತೆಗೆದು ಸುಡಲಾರಂಭಿಸಿದ್ದಾರೆ.

ಮಳೆಗಾಗಿ ದೇವರ ಮೊರೆ ಹೋದ ಕೆಲ ಗ್ರಾಮಸ್ಥರಿಗೆ, ಸ್ಥಳೀಯ ದೇವಸ್ಥಾನದಲ್ಲಿ ನಿಮಿತ್ತ ಕೇಳಿದ್ದರು. ತೊನ್ನು ಹತ್ತಿದ ಮಹಿಳೆಯ ಮೃತದೇಹವನ್ನು ಹೂಳಲಾಗಿದೆ. ಹೊರ ತಗೆದು ಸುಡುವಂತೆ ನಿಮಿತ್ತದಲ್ಲಿ ತಿಳಿದುಬಂದಿತು.. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮಾತುಕತೆ ನಡೆಸಿ ಶಿವನಿ ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಯೊಬ್ಬರ ಮೃತದೇಹವನ್ನು ಸುತ್ತ ಏಳು ಹಳ್ಳಿಯ ಸಾವಿರಾರು ಜನರು ಗುರುವಾರ ಹೊರತಗೆದು ಸುಟ್ಟು ಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ಕಾಕತಾಳಿಯ ಎಂಬಂತೆ ಗುರುವಾರ ಸಂಜೆ ಶಿವನಿ ಗ್ರಾಮದ ಸುತ್ತಮುತ್ತ ಮಳೆಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ಸದ್ಯ ಸುತ್ತಮುತ್ತಲ ಗ್ರಾಮಗಳ ಕಿವಿಗೂ ಬಿದ್ದ ಪರಿಣಾಮ ಈ ಗ್ರಾಮಗಳ ಜನರೂ ಕೂಡ ತೊನ್ನು ರೋಗದಿಂದ ಮೃತಪಟ್ಟವರ ಮೃತದೇಹ ಹೊರ ತೆಗೆದು ಸುಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಲದಿಹಳ್ಳಿ ಗ್ರಾಮದಲ್ಲಿ ವಾರದ ಹಿಂದೆ ಒಂದೇ ರಾತ್ರಿ ಹೂತಿದ್ದ 6 ಹೆಣಗಳನ್ನು ಹೊರ ತೆಗೆದು ಸುಟ್ಟು ಹಾಕಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ಜಲಕಂಟಕವನ್ನು ಎದುರಿಸಿದ್ದ ಗ್ರಾಮಸ್ಥರು ಗ್ರಾಮದ ಉಮಾಮಹೇಶ್ವರಿ ಹಾಗೂ ಶಂಕರ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದರು. ದೇವರು ತೊನ್ನು ಹತ್ತಿ ಮೃತಪಟ್ಟವರನ್ನು ಹೂತಿದ್ದಾರೆ ಎಂದು ನಿಮಿತ್ತದಲ್ಲಿ ತಿಳಿಸಲಾಯಿತು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಒಂದೇ ರಾತ್ರಿ ಕುಟುಂಬಸ್ಥರ ಅನುಮತಿ ಪಡೆದು ಮೃತದೇಹಗಳನ್ನು ಹೊರತಗೆದು ಸುಟ್ಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ

ಈ ಘಟನೆ ಸಂಬಂಧ ಮೃತರ ಸಂಬಂಧಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಯ ಮೊರೆ ಹೋಗಿದ್ದು, ಪೊಲೀಸರು ರಾಜಿ ಮಾಡಿ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News