ಕಳಸ | ನಾಪತ್ತೆಯಾಗಿದ್ದ ಎಸ್ಸೆಸೆಲ್ಸಿ ವಿದ್ಯಾರ್ಥಿಯ ಮೃತದೇಹ ಭದ್ರಾ ನದಿಯಲ್ಲಿ ಪತ್ತೆ

Update: 2025-03-19 17:24 IST
ಕಳಸ | ನಾಪತ್ತೆಯಾಗಿದ್ದ ಎಸ್ಸೆಸೆಲ್ಸಿ ವಿದ್ಯಾರ್ಥಿಯ ಮೃತದೇಹ ಭದ್ರಾ ನದಿಯಲ್ಲಿ ಪತ್ತೆ

 ಶ್ರೇಯಸ್(16)

  • whatsapp icon

ಕಳಸ : ಪಟ್ಟಣದ ಸರಕಾರಿ ಪಬ್ಲಿಕ್ ಶಾಲೆಯ ಎಸ್ಸೆಸೆಲ್ಸಿ ವಿದ್ಯಾರ್ಥಿಯೋರ್ವ ಭದ್ರಾನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ವರದಿಯಾಗಿದೆ.

ಕಳಸ ಪಬ್ಲಿಕ್ ಸ್ಕೂಲ್‍ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್(16) ಎಂಬ ವಿದ್ಯಾರ್ಥಿ ಮಾ.16ರಿಂದ ಕಾಣೆಯಾಗಿದ್ದ. ಶಾಲೆ ಬಿಟ್ಟ ನಂತರ ವಿದ್ಯಾರ್ಥಿ ಮನೆಗೆ ತೆರಳಿರಲಿಲ್ಲ. ಈ ಬಗ್ಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಯ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ವ್ಯಾಪಕ ಹುಡುಕಾಟ ನಡೆಸಲಾಗಿತ್ತು. ಮಂಗಳವಾರ ರಾತ್ರಿ ಕಳಸ ಬಾಳೆಹೊಳೆ ನಡುವಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮೇಲಿತ್ತಿ ಪರಿಶೀಲಿಸಲಾಗಿ ಅದು ನಾಪತ್ತೆಯಾಗಿದ್ದ ವಿದ್ಯಾರ್ಥಿಯದ್ದೇ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಮೂಲತಃ ಬೇಲೂರು ತಾಲೂಕಿನವನಾಗಿದ್ದು, ಸುರೇಶ್ ಶೆಟ್ಟಿ ಮತ್ತು ಜಯಂತಿ ಎಂಬವರ ಪುತ್ರನಾಗಿದ್ದಾನೆ. ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಕಳಸ ಪಬ್ಲಿಕ್ ಸ್ಕೂಲ್‍ಗೆ ಹೋಗುತ್ತಿದ್ದ. ಎಸ್ಸೆಸೆಲ್ಸಿ ಪರೀಕ್ಷೆಗೆ ಕೆಲವೇ ದಿನಗಳು ಇರುವಾಗಲೇ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಷ ತನಿಖೆ ನಡೆಸಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News