ಮುಖ್ಯವಾಹಿನಿಗೆ ಬಂದ ನಕ್ಸಲ್ ಕೋಟೆಹೊಂಡ ರವೀಂದ್ರ

Update: 2025-02-01 13:29 IST
ಮುಖ್ಯವಾಹಿನಿಗೆ ಬಂದ ನಕ್ಸಲ್ ಕೋಟೆಹೊಂಡ ರವೀಂದ್ರ
  • whatsapp icon

ಚಿಕ್ಕಮಗಳೂರು : 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಭೂಗತರಾಗಿದ್ದ ರವೀಂದ್ರ ಅಲಿಯಾಸ್ ಕೋಟೆಹೊಂಡ ರವೀಂದ್ರ (44) ಶನಿವಾರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ.

ನಕ್ಸಲ್ ಶರಣಾಗತಿ, ಪುನರ್ವಸತಿ ರಾಜ್ಯ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರಾದ ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ಕೆ.ಎಲ್.ಅಶೋಕ್ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 1:30ರ ಸಮಯದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರವೀಂದ್ರ, ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹಾಗೂ ಜಿಲ್ಲಾ ಸಮಿತಿ ಸಂಚಾಲಕ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾದರು.

ಶರಣಾಗತಿ ಪ್ರಕ್ರಿಯೆ ವೇಳೆ ಮಾತನಾಡಿದ ರವೀಂದ್ರ, ನಾನು ಮಲೆನಾಡಿನ ಜನರ ಸಂಕಷ್ಟ, ಜನವಿರೋಧಿ ಅರಣ್ಯ ಯೋಜನೆಗಳು, ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ನೊಂದು ನಕ್ಸಲ್ ಚಳವಳಿ ಸೇರಿಕೊಂಡಿದ್ದೆ. ಚಳವಳಿಯಲ್ಲಿ ಸಕ್ರಿಯನಾಗಿದ್ದ ವೇಳೆ ಕಾಡಿನಲ್ಲಿದ್ದೆ. ಸದ್ಯ ಸ್ವಇಚ್ಛೆಯಿಂದ ಸರಕಾರದ ಮುಂದೆ ಶರಣಾಗಿದ್ದೇನೆಯೇ ಹೊರತು ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದರು.

ಶರಣಾಗತಿ ಪ್ರಕ್ರಿಯೆ ಬಳಿಕ ರವೀಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೊಳಪಡಿಸಿದರು. ನಂತರ ಶೃಂಗೇರಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಸದ್ಯ ಮುಖ್ಯವಾಹಿನಿಗೆ ಮರಳಿರುವ ರವೀಂದ್ರ ಮೂಲತಃ ಶೃಂಗೇರಿ ತಾಲೂಕಿನ ಕೋಟೆಹೊಂಡ ಹುಲುಗಾರುಬೈಲು ಗ್ರಾಮದವರಾಗಿದ್ದು, 2007ರಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ರವೀಂದ್ರ ಅವರು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಭೂಗತನಾಗಿದ್ದುಕೊಂಡು ನಕ್ಸಲ್ ಚಳವಳಿಯಲ್ಲಿ ಭಾಗವಹಿಸಿದ್ದರು.

ಇತ್ತೀಚೆಗೆ ಆರು ಮಂದಿ ನಕ್ಸಲರು ರಾಜ್ಯ ಸರಕಾರದ ಮುಂದೆ ಶರಣಾಗಿದ್ದರು. ಶನಿವಾರ ರವೀಂದ್ರ ಜಿಲ್ಲಾಡಳಿತದ ಮುಂದೆ ಶರಣಾಗಿದ್ದು, ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. ಕರ್ನಾಟಕ ರಾಜ್ಯ ಕೂಡ ನಕ್ಸಲ್ ಮುಕ್ತವಾಗಿದೆ. ರಾಜ್ಯದ ಇನ್ನೂ ಕೆಲವರು ನಕ್ಸಲ್ ಚಳವಳಿಯಲ್ಲಿದ್ದಾರೆನ್ನಲಾಗುತ್ತಿದ್ದು, ಇದು ನಿಜವಲ್ಲ, ರಾಜ್ಯದಲ್ಲಿ ನಕ್ಸಲ್ ಚಳವಳಿ ಮತ್ತೆ ಆರಂಭವಾಗಿದೆ ಎಂಬುದು ಕೂಡ ನಿರಾಧಾರ.

- ಡಾ.ವಿಕ್ರಮ್ ಅಮಟೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಹಿಂದೆ ಮುಖ್ಯವಾಹಿನಿಗೆ ಮರಳಿದ ನಕ್ಸಲರಿಗೆ ಸರಕಾರ ಕೊಟ್ಟ ಭರವಸೆ ಈಡೇರಿಸಿಲ್ಲ. ಇಂದಿಗೂ ಅವರು ಮೂಲಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ಅವರ ಮೇಲಿನ ಎಲ್ಲ ಕೇಸುಗಳ ಶೀಘ್ರ ಇತ್ಯರ್ಥಕ್ಕೆ ಸಹಕಾರ ನೀಡಬೇಕು.

- ನಗರಗೆರೆ ರಮೇಶ್, ಶಾಂತಿಗಾಗಿ ನಾಗರಿಕರ ವೇದಿಕೆ ಮುಖಂಡ

ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ನಿಯಮದಂತೆ ಕೋಟೆಹೊಂಡ ರವೀಂದ್ರ ಅವರು ಶರಣಾಗಿದ್ದು, ಸರಕಾರ ಘೋಷಣೆ ಮಾಡಿದಂತೆ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ನೀಡಲಾಗುವುದು. ಜ.8ರಂದು ರಾಜ್ಯ ಸರಕಾರದ ಮುಂದೆ ಆರು ಜನ ನಕ್ಸಲರು ಶರಣಾಗಿದ್ದು, ಮೊದಲ ಹಂತದ ಪರಿಹಾರದ ಹಣವನ್ನು ಬಿಡುಗಡೆಗೊಳಿಸಲಾಗಿದೆ.

- ಮೀನಾ ನಾಗರಾಜ್, ಜಿಲ್ಲಾಧಿಕಾರಿ

ಮುಖ್ಯವಾಹಿನಿಗೆ ಬಂದಿರುವ ನಕ್ಸಲರು ಕೆಲವೊಂದು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸುವ ಜವಾಬ್ದಾರಿ ಸರಕಾರದ್ದಾಗಿದೆ.

- ಕೆ.ಪಿ.ಶ್ರೀಪಾಲ್, ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಸಮಿತಿ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News