ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಆರ್ಭಟ : ಅಲ್ಲಲ್ಲಿ ಭೂಕುಸಿತ, ರಸ್ತೆ ಸಂಪರ್ಕ ಕಡಿತ
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಬಯಲು ಭಾಗದಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಗಾಳಿ, ಮಳೆಯಿಂದಾಗಿ ಹಲವಾರು ಮನೆಗಳು ಕುಸಿದಿದ್ದರೆ, ಅಲ್ಲಲ್ಲಿ ಸಂಪರ್ಕ ಕಡಿತ, ಭೂಕುಸಿತ, ಮರಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಂತಹ ಘಟನೆಗಳು ಮುಂದುವರಿದಿವೆ.
ಹೆಬ್ಬಾಳೆ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿರುವುದರಿಂದ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮಹಲ್ಗೋಡು ಗ್ರಾಮದಲ್ಲಿ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ಕಳಸ-ಬಾಳೆಹೊನ್ನೂರು ಸಂಪರ್ಕ ಕಡಿತಗೊಂಡಿದೆ. ನೆಮ್ಮಾರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಶುಕ್ರವಾರವೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ. ಈ ನದಿಗಳು ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಹೊಲಗದ್ದೆಗಳು, ಕಾಫಿ, ಅಡಿಕೆ ತೋಟಗಳಿಗೆ ನದಿಗಳ ನೆರೆ ನೀರು ಹರಿದು ಅಪಾರ ಹಾನಿ ಸಂಭವಿಸಿದೆ.
ಕಳಸ ತಾಲೂಕಿನಾದ್ಯಂತ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯತ್ತಿದೆ. ಗುರುವಾರ ಇಡೀ ದಿನ ಮುಳುಗಡೆಯಾಗಿದ್ದ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಶುಕ್ರವಾರ ಬೆಳಗ್ಗೆ ಸೇತುವೆ ಮೇಲೆ ನೀರು ಕಡಿಮೆಯಾಗಿದ್ದು, ಆದರೆ ನಂತರ ಸುರಿದ ಮಳೆಯಿಂದಾಗಿ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 1ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಸೇತುವೆಯ ನೆರೆ ನೀರಿಲ್ಲಿ ಗುರುವಾರ ಎರಡು ಹಸುಗಳು ಕೊಚ್ಚಿ ಹೋಗಿದ್ದು, ಶುಕ್ರವಾರ ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ಕಾವಲ ಹಾಕಲಾಗಿದೆ. ಸೇತುವೆ ಮುಳುಗಡೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದ್ದು, ಬದಲಿ ಮಾರ್ಗವಾಗಿ ಹೊರನಾಡು ಸಂಪರ್ಕಿಸುವಂತಾಗಿದೆ. ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಇಡಕಣಿ ಗ್ರಾಪಂ ವ್ಯಾಪ್ತಿಯ ಕೋಟೆಮಕ್ಕಿ-ತೋಟದಮನೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿದ್ದು, ಗ್ರಾಮಗಳ ಸಂಪರ್ಕಕ್ಕೆ ರಸ್ತೆಯೇ ಇಲ್ಲದಂತಾಗಿದೆ.
ಮನೆ, ಕಟ್ಟಡಗಳಿಗೆ ಹಾನಿ :
ಕಳಸ-ಹೊರನಾಡು ರಸ್ತೆಯಲ್ಲಿರುವ ವೆಂಕಟರಮಣ ದೇವಾಲಯದ ಸಮೀಪದಲ್ಲಿ ಧರೆ ಕುಸಿದಿದ್ದು, ಪಟ್ಟಣ ಸಮೀಪದ ಕಲ್ಲಾನೆ ಎಂಬಲ್ಲಿ ಭಾಸ್ಕರ್ ಪೂಜಾರಿ ಎಂಬವರ ಮನೆ ಸಮೀಪದ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಬಾಳೆಹೊಳೆಯ ಸರಕಾರಿ ಶಾಲೆಯ ಹಿಂಬದಿಯಲ್ಲಿ ಧರೆ ಕುಸಿದು ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ. ಭಾರೀ ಮಳೆಗೆ ಹೊರನಾಡು ಗ್ರಾಪಂ ವ್ಯಾಪ್ತಿಯಲ್ಲಿ ಕಂಟೆಕೊಳಲು ಎಂಬಲ್ಲಿ ರಾಮು ಎಂಬವರ ಮನೆ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ.
ಗೊರಸಿನ ತೋಟ ಎಂಬಲ್ಲಿ ಸರಸ್ವತಿ ಎಂಬವರ ಮನೆ ಬಳಿ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಇಡಕಣಿ ಗ್ರಾಪಂ ವ್ಯಾಪ್ತಿಯ ಕೋಟೆಮಕ್ಕಿ ಎಂಬಲ್ಲಿ ಅನಿತಾ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ಹಿರೇಬೈಲು-ಕಂಕೋಡು ರಸ್ತೆ ಮಧ್ಯೆ ಭೂಕುಸಿದು ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಮಕ್ಕಿಮನೆ ನಾಗೇಂದ್ರ ಅವರಿಗೆ ಸೇರಿದ ಅರ್ಧ ಎಕರೆ ಅಡಿಕೆ ತೋಟ ಭೂಕುಸಿತದಿಂದಾಗಿ ಕೊಚ್ಚಿ ಹೋಗಿದೆ. ತೋಟದಲ್ಲಿ ಮಣ್ಣುಕುಸಿದು ಅರ್ಧ ಎಕರೆ ಅಡಿಕೆಗಿಡಗಳು ಮಣ್ಣುಪಾಲಾಗಿದೆ. ನಡ್ಲುಮನೆ ವರ್ಧಮಾನಯ್ಯ ಎಂಬುವರಿಗೆ ಸೇರಿದ ಮೂರು ಎಕರೆ ನಾಟಿ ಮಾಡಿದ ಭತ್ತದ ಗದ್ದೆ ಜಲಾವೃತಗೊಂಡಿದೆ
ಶೃಂಗೇರಿ ತಾಲೂಕಿನಲ್ಲೂ ಮಳೆ ಆರ್ಭಟಿಸುತ್ತಿದ್ದು, ಭಾರೀ ಮಳೆಯಿಂದಾಗಿ ತಾಲೂಕಿನ ನೆಮ್ಮಾರು ಗ್ರಾಮ ಸಮೀಪದಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಮೇಲೆ ಹೋಗುತ್ತಿದ್ದ ಲಾರಿಯೊಂದು ಕಂದಕಕ್ಕೆ ಉರುಳಿಬಿದ್ದಿದೆ. ಲಾರಿ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನೆಮ್ಮಾರು ಗ್ರಾಮದಲ್ಲಿ ನದಿ ತೀರದಲ್ಲೇ ಇರುವ ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ಸುಮಾರು 50 ಅಡಿ ಉದ್ದ ಬಿರುಕುಬಿಟ್ಟಿದ್ದು, ರಾತ್ರಿ ವೇಳೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ತುಂಗಾನದಿಯ ಪ್ರವಾಹ ಮುಂದುವರಿದಿದ್ದು, ಕಪ್ಪೆಶಂಕರ ಮುಳುಗಿದೆ. ಪ್ಯಾರಲರ್ ರಸ್ತೆಗೆ ನೀರು ನುಗ್ಗಿದೆ. ನದಿಪಾತ್ರದ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದೆ. ಶೃಂಗೇರಿ ಭಾಗದಲ್ಲಿ ನಿರಂತರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.