ಚಿಕ್ಕಮಗಳೂರು | ಅಡಿಕೆ, ಚಿನ್ನಾಭರಣ ಕಳ್ಳತನ : ಮೂವರು ಆರೋಪಿಗಳ ಬಂಧನ

ಚಿಕ್ಕಮಗಳೂರು : 9 ಮೂಟೆ ಅಡಿಕೆ ಮತ್ತು 10 ಗ್ರಾಂ. ಚಿನ್ನ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ 62,500 ರೂ. ಮೌಲ್ಯದ ವಸ್ತಗಳನ್ನು ಕಳಸ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಎಡದಾಳಿನ ಬೋವಿಪಾಲ್ ಎಂಬವರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 9 ಮೂಟೆ ಅಡಿಕೆ ಕಳ್ಳತನವಾಗಿರುವ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಕಳಸ ಮಾವಿನಕೆರೆ ಕೋಟೆಹೊಳೆ ಕಿರಣ್(27), ಮಾವಿನಕೆರೆ ಗ್ರಾಮ ಗಣಪತಿಕಟ್ಟೆ ರವಿ(50), ಕಳಸ ಹೊರನಾಡು ರಸ್ತೆಯ ಮೇಲಂಗಡಿ ಯು.ನಿತೀಶ್(33) ಎಂಬವರನ್ನು ಬಂಧಿಸಿ 62ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೋವಿಲಾಲ್ ಅವರ ಮನೆಯಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ಸಾಬಿತ್ ಎಂಬವರ ಮನೆಯಲ್ಲಿ ಚಿನ್ನಾಭರಣ ಹಾಘೂ 9 ಮೂಟೆ ಗೋಟು ಅಡಿಕೆ ಚೀಲಗಳನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವುದನ್ನು ಆರೋಪಿಗಳು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಶ್ಲಾಘಿಸಿದ್ದಾರೆ.