ಚಿಕ್ಕಮಗಳೂರು | ಕಾಡಾನೆ ಕೊಂದು ದಂತ ಕಳ್ಳತನ ಪ್ರಕರಣ: ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶವಾಗಿರುವ ಭೈರಾಪುರ ಅರಣ್ಯ ವಲಯದಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿರುವ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಯೇ ಭಾಗಿಯಾಗಿರುವ ಆರೋಪದ ಮೇರೆಗೆ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ನಾಯಕ್ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಆದೇಶಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೂನ್ 2024ರಲ್ಲಿ ಆನೆ ಕಳೇಬರ ಅಲ್ಲಿನ ಬೀಟ್ ಸಿಬ್ಬಂದಿಗೆ ಸಿಕ್ಕಿದೆ. ಆಗ ಅದರಲ್ಲಿ ದಂತ ಇರುವುದು ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೇ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆಯನ್ನು ಕಾಟಾಚಾರಕ್ಕೆ ಮಾಡಿಸಿ ಹೆಣ್ಣು ಆನೆ ಎಂದು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ಮಾಡಿದ ಆರೋಪವೂ ಕೇಳಿ ಬಂದಿದೆ.
ಇದರಲ್ಲಿ ಸರಕಾರೇತರ ಸಂಸ್ಥೆಯ ಸದಸ್ಯರೊಬ್ಬರು ಭಾಗಿ ಆಗಿ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎನ್ನಲಾಗಿದ್ದು, ಸರಕಾರಿ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸದೇ ಇಲಾಖೆಯ ಗುತ್ತಿಗೆ ವೈದ್ಯರೇ ಮರಣೋತ್ತರ ಪರೀಕ್ಷೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಪ್ರಕರಣ ಸಂಬಂಧ ಮಾಧ್ಯಮಗಳ ವರದಿ, ಸಾಮಾಜಿಕ ಪರಿಸರ ಕಾರ್ಯಕರ್ತರು ದೂರು ನೀಡಿದ ಮೇಲೆ ಅರಣ್ಯ ಸಚಿವರು ತನಿಖೆ ಮಾಡುವಂತೆ ಆದೇಶ ಮಾಡಿದ್ದರು. ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ಮಾಡಿ ಆನೆ ಕೊಂದು ದಂತ ನಾಪತ್ತೆ ಅಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಧೀನ ಸಿಬ್ಬಂದಿಯನ್ನು ಅಮಾನತು ಮಾಡಿ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಯತ್ನ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದ್ದು, ಹಿರಿಯ ಅಧಿಕಾರಿಗಳ ತಲೆ ದಂಡ ಆಗಬೇಕು, ಆರೋಪಿಗಳನ್ನು ಪತ್ತೆ ಹಚ್ಚಿ, ಆನೆ ದಂತಗಳನ್ನು ತಕ್ಷಣ ಪತ್ತೆ ಮಾಡಬೇಕು. ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ದೂರುದಾರ ಸಾಮಾಜಿಕ ಪರಿಸರ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಒತ್ತಾಯ ಮಾಡಿದ್ದು, ಅಧಿಕಾರಿಗಳು ತನಿಖೆ ಮಾಡಿ ಎಷ್ಟೇ ಪ್ರಭಾವಿಗಳು ಇದರಲ್ಲಿ ಇದ್ದರೂ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ.