ಎಚ್ಚರಿಕೆ ! ಔಷಧಿ ಕೊಡುವ ನೆಪದಲ್ಲಿ ಮನೆಗೆ ಬಂದು ವಂಚಿಸುತ್ತಾರೆ

ಸಾಂದರ್ಭಿಕ ಚಿತ್ರ (Meta AI)
ಚಿಕ್ಕಮಗಳೂರು: ಔಷಧಿ ಕೊಡುವ ನೆಪದಲ್ಲಿ ಆಗಂತುಕರು ಮನೆಗೆ ಬರುತ್ತಾರೆ. ಮನೆಯಲ್ಲಿ ಅನಾರೋಗ್ಯವಿದ್ದವರಿಗೆ ಮದ್ದು ಎಂದು ಹೇಳಿ ಅದ್ಯಾವುದೋ ಹುಡಿಯನ್ನು ನೀಡುತ್ತಾರೆ. ಮದ್ದೆಂದು ಭಾವಿಸಿ ಹುಡಿಯನ್ನು ಸೇವಿಸಿದವರು ಆಗಂತುಕರ ಮೋಡಿಗೆ ಒಳಗಾಗುತ್ತಾರೆ. ಅವರು ಕೇಳಿದಷ್ಟು ಹಣವನ್ನು ಯಾವುದೇ ತಕರಾರು ಇಲ್ಲದೇ ಕೊಡುತ್ತಾರೆ. ಹಣ ಕೈಯಲ್ಲಿ ಇಲ್ಲದಿದ್ದಾಗ ಬ್ಯಾಂಕಿನಿಂದ ತಂದು ಕೊಡುತ್ತಾರೆ. ತಾವು ವಂಚನೆಗೆ ಒಳಗಾಗಿರುವುದು ತಡವಾಗಿ ತಿಳಿದುಬರುತ್ತದೆ. ಅಷ್ಟರಲ್ಲಿ ವಂಚಕರು ಅಲ್ಲಿಂದ ಕಾಲ್ಕಿತ್ತಿರುತ್ತಾರೆ !.
ಇದು ಯಾವುದೇ ಸಿನೆಮಾದ ಕತೆಯಲ್ಲ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ ಪರಿಸರದಲ್ಲಿ ಕೆಲವರಿಗೆ ಈ ರೀತಿಯ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.
ಕೊಪ್ಪ ತಾಲೂಕಿನ ಗಡಿಕಲ್ ನಲ್ಲಿರುವ ದಯಾನಂದ ಎಂಬವರು ವಂಚಕರ ಮದ್ದಿನ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪರಿಯನ್ನು ವಿವರಿಸಿದ್ದು ಹೀಗೆ...
"ನನ್ನ ಮನೆಯಲ್ಲಿ ನನ್ನ ಪತ್ನಿ ಮತ್ತು ಅನಾರೋಗ್ಯಕ್ಕೀಡಾಗಿರುವ 14 ವರ್ಷದ ಮಗ ಇದ್ದಾನೆ. ಕಳೆದ ಡಿಸೆಂಬರ್ 21ರಂದು ಮನೆಗೆ ಇಬ್ಬರು ಆಗಂತುಕರು ಬೈಕಿನಲ್ಲಿ ಬಂದ್ರು. ಯಾವುದೇ ರೀತಿಯ ಅನಾರೋಗ್ಯಕ್ಕೆ ಮದ್ದು ನೀಡುವುದಾಗಿ ಹೇಳಿದರು. ಅವರು ಅನಾರೋಗ್ಯಕ್ಕೀಡಾಗಿರುವ ನನ್ನ ಮಗನನ್ನು ಗಮನಿಸುತ್ತಾರೆ. ಆತನ ಅನಾರೋಗ್ಯವನ್ನು ನಾವು ಗುಣಪಡಿಸುತ್ತೇವೆ ಎಂದು ಭರವಸೆ ನೀಡಿದರು. ನಾವು ಆತನಿಗೆ ನೀಡುವ ಔಷಧಿಯಿಂದ ಏನೂ ತೊಂದರೆ ಆಗದು, ಬೇಕಿದ್ದರೆ ಮೊದಲು ನೀವು ಈ ಮದ್ದು ತಿಂದು ನೋಡಿ ಎಂದು ನನಗೆ ಮತ್ತು ನನ್ನ ಪತ್ನಿಗೆ ಹುಡಿಯೊಂದನ್ನು ನೀಡುತ್ತಾರೆ. ನಾವು ಅದನ್ನು ಸೇವಿಸುತ್ತೇವೆ. ಆಮೇಲೆ ಅದೇನಾಯಿತೋ ಗೊತ್ತಿಲ್ಲ. ಅವರು ನನ್ನಲ್ಲಿ ಔಷಧಿ ಮೊತ್ತ ಎಂದು 73,400 ರೂ. ಕೇಳುತ್ತಾರೆ. ನಾನು ಯಾವುದೇ ತಕರಾರು ಮಾಡದೆ ಕೈಯಲ್ಲಿದ್ದ 15 ಸಾವಿರ ರೂ. ನಗದು ಕೊಡುತ್ತೇನೆ. ಉಳಿದ ಮೊತ್ತನ್ನು ಬ್ಯಾಂಕಿಗೆ ತೆರಳಿ ಕ್ಯಾಶ್ ಮಾಡಿ ತಂದು ಕೊಟ್ಟಿದ್ದೇನೆ'' ಎನ್ನುತ್ತಾರೆ.
"ಅಂದು ಸಂಜೆಯ ವರೆಗೆ ನನ್ನೊಡನೆ ಅವರು ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ರಾತ್ರಿ ಮತ್ತೆ ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಆಗಿತ್ತು. ಆದರೆ ಮರುದಿನ ಬೆಳಗ್ಗೆ ಎದ್ದಾಗಲೇ ವಂಚಕರು ನನ್ನನ್ನು ವಂಚಿಸಿರುವುದು ಅರಿವಿಗೆ ಬಂತು" ಎನ್ನುತ್ತಾರೆ ದಯಾನಂದ.
ಇದೇ ರೀತಿ ಗಡೀಕಲ್ ಪಕ್ಕದ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ವಂಚಕರ ಮದ್ದಿನ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.
ಇಲ್ಲಿನ ನಿವಾಸಿ ಮಹೇಶ್ ಎಂಬವರನ್ನು ಸಂಪರ್ಕಿಸಿರುವ ವಂಚಕರು ನಿಮ್ಮ ಕಾಲುನೋವನ್ನು ನಾವು ನಿವಾರಿಸುತ್ತೇವೆ ಎಂದು ಹೇಳಿ ಮದ್ದೆಂದು ಹುಡಿಯೊಂದನ್ನು ಕೊಟ್ಟಿದ್ದಾರೆ. ಅದನ್ನು ಸೇವಿಸಿದ ಬಳಿಕ ಮಹೇಶ್ ರಿಂದ ಔಷಧಿ ಹಣವೆಂದು ಹೇಳಿ 14 ಸಾವಿರ ರೂ. ಕೇಳಿದ್ದಾರೆ. ಅವರು ಕೇಳಿದಷ್ಟು ಮೊತ್ತವನ್ನು ಯಾವುದೇ ತಕರಾರರು ಮಾಡದೆ ಮಹೇಶ್ ಕೊಟ್ಟಿದ್ದಾರೆ. ಬಳಿಕ ಆಗಂತುಕರು ಎರಡು ದಿನದಲ್ಲಿ ಮತ್ತೆ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಅವರು ನೀಡಿದ್ದ ಮೊಬೈಲ್ ಸಂಖ್ಯೆಗೆ ಮಹೇಶ್ ಮರುದಿನ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಆಗಲೇ ಮಹೇಶ್ ರಿಗೆ ವಂಚನೆಯಾಗಿರುವುದು ಗಮನಕ್ಕೆ ಬಂದಿದೆ.
ಇಲ್ಲಿ ವಂಚಕರ ಆಟಕ್ಕೆ ಮರುಳಾಗಿ ಮೋಸ ಹೋದವರು ತಮ್ಮಲ್ಲಿಗೆ ಬಂದ ವಂಚಕರ ಯಾವುದೇ ಮಾಹಿತಿಯನ್ನು ಪಡೆದಿಲ್ಲ. ಅಲ್ಲದೇ ಸ್ವಯಂ ತಾವೇ ಹಣ ಕೊಟ್ಟಿರುವುದರಿಂದ ಪೊಲೀಸ್ ದೂರು ದಾಖಲಿಸಲು ಕೂಡಾ ಸಾಧ್ಯವಾಗಿಲ್ಲ. ನೀವೇ ಸ್ವಯಂ ಹಣ ಕೊಟ್ಟಿರುವುದರಿಂದ ದೂರು ದಾಖಲಿಸಲು ಆಗದು ಎಂದು ಪೊಲೀಸರು ಹೇಳಿದ್ದಾರೆ ಎನ್ನುತ್ತಾರೆ ದಯಾನಂದ.