‘ಎಮರ್ಜೆನ್ಸಿ’ ಚಿತ್ರದ ಸುತ್ತ ವಿವಾದ: ಕಂಗನಾ ರಣಾವತ್ ಗೆ ಮತ್ತೆ ಸಂಕಷ್ಟ
ಮುಂಬೈ: ಚಂಡೀಗಢದ ಜಿಲ್ಲಾ ನ್ಯಾಯಾಲಯವೊಂದು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಗೆ ಅವರ ವಿವಾದಾತ್ಮಕ ‘ಎಮರ್ಜೆನ್ಸಿ’ ಚಿತ್ರಕ್ಕಾಗಿ ನೋಟಿಸ್ ಜಾರಿಗೊಳಿಸಿದೆ. ಕಂಗನಾ ರಣಾವತ್ ನಿರ್ದೇಶನದ ‘ಎಮರ್ಜೆನ್ಸಿ’ ಚಿತ್ರವು ಸಿಖ್ಖರ ವ್ಯಕ್ತಿತ್ವಕ್ಕೆ ಮಸಿ ಬಳಿದಿದೆ ಎಂದು ಆರೋಪಿಸಿ ಜಿಲ್ಲಾ ಬಾರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಿಖ್ಖರ ಕುರಿತು ತಪ್ಪು ಚಿತ್ರಣ ನೀಡುವುದರೊಂದಿಗೆ, ಸಿಖ್ ಸಮುದಾಯದ ಕುರಿತು ಕೆಲವು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ವಾದಿಸಿರುವ ವಕೀಲ ರವೀಂದರ್ ಸಿಂಗ್ ಬಸೈ, ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಡಿಸೆಂಬರ್ 5ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಸಿಖ್ಖರನ್ನು ತಪ್ಪಾಗಿ ಬಿಂಬಿಸಲಾಗಿದೆ ಹಾಗೂ ಚಾರಿತ್ರಿಕ ಸಂಗತಿಗಳನ್ನು ತಿರುಚಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಹಲವಾರು ಸಿಖ್ ಸಂಘಟನೆಗಳು ಆರೋಪಿಸುತ್ತಿರುವುದರಿಂದ ಕಂಗನಾ ರಣಾವತ್ ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಚಿತ್ರವು ಬಿಡುಗಡೆಗೂ ಮುನ್ನವೇ ತೀವ್ರ ವಿವಾದಕ್ಕೆ ಸಿಲುಕಿದೆ.
ಇತ್ತೀಚೆಗೆ, ತನ್ನ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ದೊರೆಯುವುದು ವಿಳಂಬವಾಗಿದ್ದರಿಂದ, ನಾನು ನನ್ನ ಆಸ್ತಿಯನ್ನು ಮಾರಾಟ ಮಾಡಬೇಕಾಗಿ ಬಂದಿತು ಎಂದು ಕಂಗನಾ ರಣಾವತ್ ಅಳಲು ತೋಡಿಕೊಂಡಿದ್ದರು. ಪಾಲಿ ಹಿಲ್ ಬಾಂದ್ರಾದಲ್ಲಿರುವ ಅವರ ಬಂಗಲೆಯನ್ನು ರೂ. 32 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.