ಎ.ಆರ್‌. ರೆಹಮಾನ್‌ ಸಂಗೀತ ರಸಮಂಜರಿ ಸ್ಥಳದಲ್ಲಿ ಭಾರೀ ನೂಕುನುಗ್ಗಲು; ಆಯೋಜಕರ ವಿರುದ್ಧ ಆಕ್ರೋಶ

Update: 2023-09-11 09:13 GMT

Photo credit: Twitter

ಚೆನ್ನೈ: ರವಿವಾರ ಚೆನ್ನೈನ ಪಣಿಯೂರ್‌ ಎಂಬಲ್ಲಿನ ಆದಿತ್ಯರಂ ಪ್ಯಾಲೇಸ್‌ನಲ್ಲಿ ಖ್ಯಾತ ಸಂಗೀತಕಾರ ಆ.ರ್‌. ರೆಹಮಾನ್‌ ಅವರ ಸಂಗೀತ ಕಾರ್ಯಕ್ರಮ “ಮರಕುಮ ನೆಂಜಂ” ವಸ್ತುಶಃ ಗೊಂದಲದ ಗೂಡಾಗಿ ಪರಿಣಮಿಸಿ ಕಾಲ್ತುಳಿತ ರೀತಿಯ ಸನ್ನಿವೇಶಕ್ಕೆ ಕಾರಣವಾಯಿತು.

ಈ ಸಂಗೀತ ಕಾರ್ಯಕ್ರಮಕ್ಕಾಗಿ ಟಿಕೆಟ್‌ ಖರೀದಿಸಿದವರಿಗೆ ಪ್ರವೇಶದ್ವಾರದತ್ತ ಸಾಗಲು ಆಯೋಜಕರು ಸರಿಯಾದ ಮಾರ್ಗದರ್ಶನ ನೀಡದೇ ಇದ್ದುದರಿಂದ ಅಲ್ಲಿ ವಸ್ತುಶಃ ಕೋಲಾಹಲ ಸೃಷ್ಟಿಯಾಗಿತ್ತು.

ಸಾವಿರಾರು ರೂಪಾಯಿ ಬೆಲೆಯ ಟಿಕೆಟ್‌ಗಳನ್ನು ಖರೀದಿಸಿದ್ದ ಹಲವು ಅಭಿಮಾನಿಗಳು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸುವುದು ಅಸಾಧ್ಯವಾಗಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಟಿಕೆಟ್‌ ಹೊಂದಿದವರು ಜಮಾಯಿಸಿದ್ದರಿಂದ ಆಯೋಜಕರು ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್‌ ಮಾರಾಟ ಮಾಡಿರಬೇಕೆಂದು ಶಂಕಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಈ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡು ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.

ತಮ್ಮ ಅಭಿಮಾನಿಗಳಿಗಾದ ನಿರಾಸೆಯನ್ನು ಮನಗಂಡು ರೆಹಮಾನ್‌ ಟ್ವೀಟ್‌ ಮಾಡಿದ್ದಾರೆ : “ಟಿಕೆಟ್‌ ಖರೀದಿಸಿ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶಿಸಲು ಸಾಧ್ಯವಾಗದೇ ಇರುವವರು ದಯವಿಟ್ಟು ನಿಮ್ಮ ಟಿಕೆಟ್‌ ಪ್ರತಿಯನ್ನು ನಿಮ್ಮ ಸಮಸ್ಯೆಯೊಂದಿಗೆ ಹಂಚಿಕೊಳ್ಳಿ. ನಮ್ಮ ತಂಡ ನಿಮ್ಮನ್ನು ಸಂಪರ್ಕಿಸುತ್ತದೆ,” ಎಂದು ಒಂದು ಇಮೇಲ್‌ ವಿಳಾಸ ನೀಡಿದ್ದಾರೆ.

ಟಿಕೆಟ್‌ ಹಣವನ್ನು ರೆಹಮಾನ್‌ ಮರುಪಾವತಿ ಮಾಡಬಹುದೆಂದು ಹೇಳಲಾಗಿದೆ.

ಇನ್‌ಸ್ಟಾಗ್ರಾಂನಲ್ಲೂ ಈ ಕುರಿತು ಅವರು ಬರೆದಿದ್ದಾರೆ- “ಕೆಲ ಜನರು ನನ್ನನ್ನು G.O.A.T. ಎನ್ನುತ್ತಾರೆ… ನಾನು ಈ ಬಾರಿ ಹರಕೆಯ ಆಡು ಆಗುತ್ತೇನೆ, ಎಲ್ಲರೂ ಎದ್ದೇಳಬೇಕು, ಚೆನ್ನೈ ಕಲಾಕ್ಷೇತ್ರವು ವಿಶ್ವ ಮಟ್ಟದ ಸೌಕರ್ಯಗಳೊಂದಿಗೆ ಸಮೃದ್ಧವಾಗಬೇಕು, ಪ್ರವಾಸೋದ್ಯಮ ಸುಧಾರಿಸಬೇಕು, ಜನಜಂಗುಳಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು, ಎಲ್ಲರಿಗೂ ಉತ್ತಮ ಅನುಭವ ನೀಡುವಂತಾಗಬೇಕು,” ಎಂದು ಅವರು ಬರೆದಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಅವರು “ಆಯೋಜಕರು (ಎಸಿಟಿಸಿ ಈವೆಂಟ್ಸ್)‌ ಸುಮಾರು 46000 ಆಸನಗಳ ಏರ್ಪಾಟು ಮಾಡಿದ್ದರು. ಕೆಲ ವಿಭಾಗಗಳಲ್ಲಿ ಎಲ್ಲರೂ ಒಂದು ಕಡೆ ಕುಳಿತು ಇನ್ನೊಂದು ಕಡೆ ಸರಿಯಲಿಲ್ಲ. ಇದನ್ನು ಗಮನಿಸಿದ ಪೊಲೀಸರು ಸಭಾಂಗಣ ತುಂಬಿದೆ ಎಂದು ಮುಚ್ಚಿದರು., ಅಷ್ಟು ಹೊತ್ತಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ನಾವು ಯಾವುದೇ ತಯಾರಿ ನಡೆಸದೆ ಚಂಡಮಾರುತ ಎದುರಿಸಿದಂತಾಗಿತ್ತು. ಕಳೆದ ವರ್ಷ ಅಮೆರಿಕಾದಲ್ಲಿ 20 ಕಾರ್ಯಕ್ರಮ ನಡೆಸಿದ್ದೆವು. ಎಲ್ಲವೂ ಸರಾಗವಾಗಿತ್ತು. ನಾವು ಇಲ್ಲಿನ ವ್ಯವಸ್ಥೆಯನ್ನು ನಂಬಿದ್ದೆವು. ಮರಕ್ಕುಮ ನೆಂಜಂ ಭಾರತದ ಇಲ್ಲಿಯ ತನಕದ ಗರಿಷ್ಠ ಟಿಕೆಟ್‌ ಮಾರಾಟವಾದ ಶೋ ಆಗಿತ್ತು ಆದರೆ ನಾವು ಶೋಗಿಂತ ಜನರನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ. ಇದರ ಮೇಲೆ ನನಗೆ ನಿಯಂತ್ರಣವಿಲ್ಲ. ಕಾರ್ಯಕ್ರಮವನ್ನು ಚೆನ್ನಾಗಿ ಪ್ರಸ್ತುತಪಡಿಸುವುದು ಹೇಗೆಂದು ಗೊತ್ತು, ಆದರೆ ಮುಂದೆ ಕಲಾವಿದರೇ ಮುಂದೆ ನಿಂತು ಇಂತಹ ಏರ್ಪಾಟುಗಳ ಬಗ್ಗೆ ತಿಳಿದುಕೊಳ್ಳಬೇಕಾದೀತು,” ಎಂದು ಹೇಳಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News