ಬಂಟ್ವಾಳ: ಗುಡ್ಡದ ಹುಲ್ಲುಗಾವಲಿಗೆ ಬೆಂಕಿ, ನಂದಿಸಲು ಹೋದ ದಂಪತಿ ಸಜೀವ ದಹನ
ಮಂಗಳೂರು, ಜ.28: ಅಗ್ನಿ ದುರಂತವೊಂದರಲ್ಲಿ ದಂಪತಿ ಸಜೀವ ದಹನವಾದ ದುರ್ಘಟನೆ ಬಂಟ್ವಾಳ ತಾಲೂಕಿನ ಲೊರೆಟ್ಟೊದ ತುಂಡುಪದವು ರವಿವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.
ಗಿಬ್ಬರ್ಟ್ ಕಾರ್ಲೊ (78) ಮತ್ತು ಕ್ರಿಸ್ಟಿನಾ ಕಾರ್ಲೊ (70) ಬೆಂಕಿಗೆ ಆಹುತಿಯಾಗಿರುವ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಮಧ್ಯಾಹ್ನ ವೇಳೆ ಮನೆಯ ಸಮೀಪದಲ್ಲಿರುವ ಗುಡ್ಡದ ಮುಳಿಹುಲ್ಲಿಗೆ ಬಿದ್ದಿರುವ ಬೆಂಕಿಯನ್ನು ನಂದಿಸಲು ಹೋಗಿದ್ದ ದಂಪತಿಗೆ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಸಜೀವ ದಹನಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಿಲ್ಬರ್ಟ್ ಕಾರ್ಲೊ ಹೊರದೇಶದಲ್ಲಿ ಕೆಲಸದಲ್ಲಿದ್ದು ನಿವೃತ್ತಿ ಪಡೆದು ಪತ್ನಿ ಕ್ರಿಸ್ಟಿನಾ ಕಾರ್ಲೊ ಅವರೊಂದಿಗೆ ಊರಿನಲ್ಲಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಅವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ ನಡೆದಿತ್ತು. ಇವರಿಗೆ ಮೂವರು ಪುತ್ರಿಯರಿದ್ದಾರೆ. ಈ ಪೈಕಿ ಇಬ್ಬರು ಹೊರದೇಶದಲ್ಲಿ ಮತ್ತು ಒಬ್ಬರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಆಗಿದ್ದೇನು ?
ಇಂದು ಮಧ್ಯಾಹ್ನ ತುಂಡುಪದವು ಗುಡ್ಡಕ್ಕೆ ಬೆಂಕಿ ಬಿದ್ದಿತ್ತು. ಮುಳಿ ಹುಲ್ಲಿಗೆ ಬಿದ್ದ ಬೆಂಕಿ ಧಗಧಗ ಉರಿಯುತ್ತಾ ಸುತ್ತಲೂ ವ್ಯಾಪಿಸಿತ್ತು. ಸ್ಥಳೀಯರು ನಂದಿಸುವ ಹೊತ್ತಿನಲ್ಲಿ ಇಬ್ಬರು ಬೆಂಕಿಗೆ ಆಹುತಿಯಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ. ಬೆಂಕಿ ಗಾಳಿಗೆ ಇವರ ಮನೆ ಪಕ್ಕದ ಗುಡ್ಡೆಯಲ್ಲಿ ವ್ಯಾಪಿಸಿರಬೇಕು, ಈ ಸಂದರ್ಭ ದಂಪತಿ ಅದನ್ನು ನಂದಿಸಲೆಂದು ತೆರಳಿದಾಗ ಇಬ್ಬರೂ ಅಗ್ನಿಯ ತೆಕ್ಕೆಗೆ ಸಿಲುಕಿಕೊಂಡಿದ್ದಾರೆ. ಇಬ್ಬರೂ ವಯೋ ವೃದ್ಧರಾದ ಕಾರಣ ಅದರಿಂದ ಹೊರಬರಲಾಗದೆ ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.